Menu

ಬದಿಯಡ್ಕ: ರಸ್ತೆ ಪಕ್ಕದಲ್ಲಿ ತ್ಯಾಜ್ಯ: ಸ್ವಚ್ಛ ಭಾರತ್ ಮರೆತರೇ ಇಲ್ಲಿನವರು ?

  • Published in ಕೇರಳ
  • Read 33 times
  • Comments::DISQUS_COMMENTS
ಬದಿಯಡ್ಕ: ಮಹತ್ವದ ಸ್ವಚ್ಛ ಭಾರತ್ ಯೋಜನೆ ಸಕ್ರೀಯವಾಗಿದ್ದರೂ ಬದಿಯಡ್ಕ ಪರಸರದಲ್ಲಿ ಇನ್ನೂ ಸಾಕಾರಕ್ಕೆ ಬಂದಂತಿಲ್ಲ.
   
ಬದಿಯಡ್ಕ ಪರಿಸರದಲ್ಲಿ ನಿರಂತರವಾಗಿ ತ್ಯಾಜ್ಯವನ್ನು ರಸ್ತೆ ಪಕ್ಕದಲ್ಲಿ ಎಸೆಯುವ ಪ್ರವೃತ್ತಿ ದಿನಾ ನಡೆಯುತ್ತಿದೆ. ಬದಿಯಡ್ಕ ಪರಿಸ ರದ ಬೀಜಂತ್ತಡ್ಕ, ಪೊಯ್ಯೆಕಂಡ ತಿರುವು ಸಹಿತ ಉಕ್ಕಿನಡ್ಕ ಪರಿಸರ, ಪಳ್ಳತ್ತಡ್ಕ ಪರಿಸರ, ಎಡನೀರು ಪರಿಸರ, ಬಳ್ಳಂಬೆಟ್ಟು, ಪೆರ್ಲ - ಕಾಟುಕುಕ್ಕೆ ರಸ್ತೆ, ಎಡನೀರು - ಎದುರ್ತೋಡು ರಸ್ತೆ, ಬದಿಯಡ್ಕ - ಕಾಸರಗೋಡಿಗೆ ಪ್ರಯಾ ಣಿಸುವ ರಸ್ತೆಯುದ್ದಕ್ಕೂ ತ್ಯಾಜ್ಯ ಎಸೆಯಲಾಗುತ್ತಿದೆ. ಪೆಯ್ಯೆಕಂಡದಲ್ಲಿ ಸುಮಾರು ಅರ್ಧ ಕಿಲೋ ಮೀಟರ್ ದೂರದವರೆಗೂ ತ್ಯಾಜ್ಯ ಎಸೆಯಲಾಗಿದೆ.

ಈ ಪ್ರದೇಶದಲ್ಲಿ ಹೆಚ್ಚಾಗಿ ಕೋಳಿ ತ್ಯಾಜ್ಯಗಳನ್ನೇ ಎಸೆಯಲಾಗುತ್ತಿದೆ. ಕೋಳಿ ಫಾರ್ಮ್‍ನಿಂದ ಕೋಳಿ ತ್ಯಾಜ್ಯ, ಮದುವೆ ಮನೆಗಳಿಂದ ಕೋಳಿ ತ್ಯಾಜ್ಯವನ್ನು ಗೋಣಿ ಚೀಲಗಳಲ್ಲಿ ತುಂಬಿಸಿಯೂ ಇಲ್ಲವೆ ರಸ್ತೆ ಬದಿಯುದ್ದಕ್ಕೂ ಚೆಲ್ಲಾಪಿಲ್ಲಿ ಯಾಗಿ ಎಸೆದು ಪರಾರಿಯಾಗುವ ಕಿಡಿಗೇಡಿಗಳೂ ಕಮ್ಮಿಯಿಲ್ಲ. ರಾತ್ರಿ ಹೊತ್ತಿನಲ್ಲಿ ಮಿನಿ ಲಾರಿಗಳಲ್ಲಿ, ವ್ಯಾನ್‍ಗಳಲ್ಲಿ, ರಿಕ್ಷಾಗಳಲ್ಲಿ ತಂದು ರಸ್ತೆ ಬದಿ ಎಸೆಯಲಾಗುತ್ತಿದೆ. ರಸ್ತೆ ಬದಿ ತ್ಯಾಜ್ಯ ಎಸೆಯುವವರನ್ನು ಬಂಧಿಸಿ ಅವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವಂತೆ ಆದೇಶ ನೀಡಲಾಗಿದ್ದರೂ ಈ ಆದೇಶಗಳು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿಲ್ಲ. ಈ ಕಾರಣದಿಂದಲೇ ತ್ಯಾಜ್ಯ ರಾಶಿ ಮತ್ತೆ ಮತ್ತೆ ರಸ್ತೆ ಬದಿಗಳಲ್ಲಿ ರಾಶಿ ಬೀಳುತ್ತಿವೆ.

ಸಾಂಕ್ರಾಮಿಕ ರೋಗ: ರಸ್ತೆ ಬದಿಯಲ್ಲಿ ಕೋಳಿ ಸಹಿತ ವಿವಿಧ ಪ್ರಾಣಿಗಳ ತ್ಯಾಜ್ಯ ಎಸೆಯುವುದರಿಂದ ತ್ಯಾಜ್ಯ ಕೊಳೆತು ದುರ್ಗಂಧ ಬೀರುವುದಲ್ಲದೆ, ಈ ಪರಿಸರದಲ್ಲಿ ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ತ್ಯಾಜ್ಯ ಕೊಳೆತು ರೋಗ ಹರಡುವ ಕೇಂದ್ರಗಳಾಗಿ ಮಾರ್ಪಾಡುಗೊಳ್ಳುತ್ತಿವೆ. ಕೊಳೆತ ತ್ಯಾಜ್ಯವನ್ನು ನಾಯಿ, ಕಾಗೆಗಳು ಹೆಕ್ಕಿ ಹೆಕ್ಕಿ ಪರಿಸರದಲ್ಲಿ ವ್ಯಾಪಕವಾಗಿ ಹರಡುತ್ತವೆ. ಕಾಗೆಗಳು ಸಮೀಪದ ಬಾವಿಗಳಿಗೂ ತ್ಯಾಜ್ಯವನ್ನು ತಂದು ಹಾಕುತ್ತವೆ. ಇದರಿಂದಾಗಿ ಬಾವಿ ನೀರನ್ನೂ ಕುಡಿಯದಂತಾಗುತ್ತಿದೆ. ತ್ಯಾಜ್ಯ ಕೊಳೆಯುವುದರಿಂದ ಸೊಳ್ಳೆಗಳ ಕೇಂದ್ರಗಳಾಗಿ ಪರಿವರ್ತನೆಗೊಂಡು ವಿವಿಧ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ. ಈಗಾಗಲೇ ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಸಾಂಕ್ರಾಮಿಕ ರೋಗಗಳಿಗೆ ಹಲವರು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಾದರೂ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ ಜವಾಬ್ದಾರಿ ಸಂಬಂಧಪಟ್ಟ ಅಧಿಕಾರಿಗಳಿಗಿದೆ. ಅದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನ ತಳೆದಿದ್ದಾರೆ.
More in this category: « ಬದಿಯಡ್ಕ: ವ್ಯಾಪಾರಿ ಏಕೋಪನ ಸಮಿತಿ ಸಭೆ ಕಾಸರಗೋಡು ಗೋ ತಳಿ ಸಾಕಣೆ ಕೇಂದ್ರ: ಉದ್ಘಾಟನೆಗೊಂಡರೂ ಕಾರ್ಯಾರಂಭಗೊಂಡಿಲ್ಲ »
back to top