Menu

ಗ್ರಂಥಾಂತರಂಗದ ತಲ್ಲಣಗಳನ್ನು ಹಂಚಿಕೊಳ್ಳೋಣ ಬನ್ನಿ ನೀರ್ಚಾಲಿಗೆ

  • Published in ಕೇರಳ
  • Read 4 times
  • Comments::DISQUS_COMMENTS
ಕಾಸರಗೋಡು, : ಪ್ರಪಂಚವನ್ನು ಸುತ್ತುವುದು ಹಲವರ ಹವ್ಯಾಸವಾದರೆ ಪುಸ್ತಕ ಪ್ರಪಂಚದಲ್ಲಿ ಸುತ್ತುವುದು, ಓಡಾಡುವುದು, ಸುಳಿದಾಡುವುದು, ತಮ್ಮನ್ನೆ ತಾವು ಮರೆಯುವುದು ಇನ್ನೂ ಕೆಲವರ ಹವ್ಯಾಸ. ಪಾಲಿಗೆ ಬಂದುದು ಪಂಚಾಮೃತವೆಂದು ಬದುಕನ್ನು ಅನುಭವಿಸುವುದು ಎಲ್ಲರ ಅನಿವಾರ್ಯತೆಯಾದರೆ, ಅನುಭವಿಸಿದ ಬದುಕನ್ನು ಅಕ್ಷರದ ಚಕ್ಷುವಿನಲ್ಲಿ ನೋಡುವುದು, ಅನುಭವಿಸುವುದು, ಆಸ್ವಾದಿಸುವುದು ಒಂದು ವಿಶಿಷ್ಟ, ಮನೋಹರ ಭಾವಾನುಭೂತಿ. ಹೀಗೆ ಅಕ್ಷರ ಲೋಕದಲ್ಲಿ ವಿಹರಿಸುವ, ಪ್ರವಹಿಸುವ, ಈಜಾಡುವ, ಮುಳುಗುವ, ತಡಕಾಡುವ ಮನಸುಗಳೆಲ್ಲ ಆಗಾಗ ಒಂದೆಡೆ ಸೇರುವುದಿದೆ. ತಮ್ಮ ಸುಖ ಸಂತೋಷವನ್ನು, ದು:ಖ ದುಮ್ಮಾನಗಳನ್ನು ತೊಳಲಾಟ ಬಳಲಾಟಗಳನ್ನೆಲ್ಲ ಹತ್ತು ಮನಸ್ಸುಗಳೊಡನೆ ಹಂಚಿಕೊಳ್ಳುವ ಕ್ಷಣ ನಿಜಕ್ಕೂ ಅಪ್ಯಾಯಮಾನ. ಅಂತಹ ಉತ್ಕಟ ಮುಹೂರ್ತ ಇದೀಗ ಕಾಸರಗೋಡಿನ ಪುತ್ಸಕ ಪ್ರಪಂಚ ಬಂಧುಗಳಿಗೆ ಒದಗಿ ಬಂದಿದೆ.

ಕಾಸರಗೋಡು ಕನ್ನಡ ಲೇಖಕರ ಸಂಘವೇ ಈ ಮುಹೂರ್ತ ಕೂಡಿ ಬರಿಸಿದ ಪುರೋಹಿತ.
ಮೇ 23 ರಂದು ನೀರ್ಚಾಲು ಶಾಲೆಯ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆಯುವ ಕಾಸರಗೋಡು ಕನ್ನಡ ಲೇಖಕರ ಮತ್ತು ಪ್ರಕಾಶಕರ ಸಮಾವೇಶ ಇಂಥ ಒಂದು ಮಹತ್ವದ ಕೆಲಸ ಮಾಡಲಿದೆ.

ಅಂದು ಬೆಳಗ್ಗೆ 9.30 ಕ್ಕೆ ಡಾ| ಹರಿಕೃಷ್ಯ ಭರಣ್ಯ ಅವರಿಂದ ಉದ್ಘಾಟನೆಗೊಂಡು ಡಾ|ರಮಾನಂದ ಬನಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಕ್ತ ಸಂವಾದ ಇದೆ.

ಅಪರಾಹ್ನ 1.30 ಕ್ಕೆ ವಿಶ್ವ ಕೋಶದ ಬಳಕೆ ಹಾಗೂ ತಯಾರಿಯ ಬಗ್ಗೆ ಕವಿ ಡಾ| ಕೆ.ವಿ. ತಿರುಮಲೇಶ್ ಅವರ ಉಪನ್ಯಾಸಕ್ಕೆ ಡಾ| ಪದ್ಮನಾಭ ಕೇಕುಣ್ಣಾಯ ಪ್ರತಿಕ್ರಿಯಿಸಲಿದ್ದಾರೆ. ನಂತರ ಮುಕ್ತ ಸಂವಾದ ನಡೆಯಲಿದೆ. ಸಂಜೆ 4.30 ಕ್ಕೆ ಎಸ್.ವಿ.ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ| ವಸಂತ ಕುಮಾರ್ ಪೆರ್ಲ ಅವರು ಭಾಷಣ ಮಾಡಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಕಾಸರಗೋಡು ಪ್ರಕಾಶನ ವಿದ್ಯಾನಗರ ಇದರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.

ಕಾಸರಗೋಡು ಪರಿಸರದ ಎಲ್ಲಾ ಲೇಖಕರೂ, ಪ್ರಕಾಶಕರೂ, ಓದುಗರೂ ಕೂಡ ಇದರಲ್ಲಿ ಭಾಗವಹಿಸಿ ತಮ್ಮ ಮುಕ್ತ ಮನಸನ್ನು ತೆರೆದಿಡಬಹುದು.

ಲೇಖಕರು ಬರುವಾಗ ತಮ್ಮ ಪ್ರಕಟಿತ ಕೃತಿಗಳನ್ನು ತರಬಹುದು. ಪುಸ್ತಕ ಪ್ರದರ್ಶನ ಮತ್ತು ಮಾರಾಟ ಇದೆ. ಪ್ರತಿಗಳು ಇಲ್ಲವಾದಲ್ಲಿ ಪುಸ್ತಕ ಪರಿಚಯ ಬರೆದು ತರಬಹುದು. ಬರಲು ಸಾಧ್ಯವಾಗದಿದ್ದರೆ ಪುಸ್ತಕದ ಪ್ರತಿ ಅಥವಾ ಪರಿಚಯವನ್ನು ಕಳುಹಿಸಿಕೊಡಬಹುದು.
More in this category: « ಬಜಕೂಡ್ಲು ಗೋಶಾಲೆಯಲ್ಲಿ ಸುರಭಿ ಸಮರ್ಪಣಮ್ ಮಕ್ಕಳು ಸಹಿತ ಒಂದೇ ಕುಟುಂಬದ ಐವರು ನಾಪತ್ತೆ »
back to top