ಮಂಗಳೂರು

ವೈದ್ಯರ ನಿರ್ಲಕ್ಷ್ಯ: ಬಾಣಂತಿ ಸಾವಿಗೆ ಪ್ರತಿಭಟನೆ

  • Published in ಮಂಗಳೂರು
  • Read 30 times
  • Comments::DISQUS_COMMENTS
ಮಂಗಳೂರು: ಕಾಲು ನೋವಿಗೆ ವೈದ್ಯರು ಸರಿಯಾದ ಚಿಕಿತ್ಸೆಯನ್ನು ನೀಡದೆ ನಿರ್ಲಕ್ಷ್ಯ ತೋರಿದ ಪರಿಣಾಮ ಬಾಣಂತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಮೃತ ಬಾಣಂತಿಯ ಸಂಬಂಧಿಕರು ಮತ್ತು ಗ್ರಾಮಸ್ಥರು ಲೇಡಿಗೋಷನ್ ಆಸ್ಪತ್ರೆಗೆ ಮುತ್ತಿಗೆ ಹಾಕಿದ ಘಟನೆ ನಿನ್ನೆ ಸಂಜೆ ಸಂಭವಿಸಿದೆ.
 
ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಮೃತ ಗೃಹಿಣಿಯ ಕುಟುಂಬಕ್ಕೆ ಹತ್ತು ಲಕ್ಷ ರೂ. ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಯನ್ನು ಹಿಂದಕ್ಕೆ ಪಡೆದುಕೊಳ್ಳಲಾಯಿತು.
 
ಕೊಕ್ಕಡ ನಿವಾಸಿ ಪೂವಕ್ಕ ಅವರನ್ನು ಹೆರಿಗೆಗಾಗಿ ಏಪ್ರಿಲ್ 21ರಂದು ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ಸಹಜ ಹೆರಿಗೆಯಾಗದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಿದ್ದರು. ಹೆರಿಗೆಯ ಬಳಿಕ ತಾಯಿ ಮಗು ಆರೋಗ್ಯವಾಗಿದ್ದರು. ಎರಡೇ ದಿನದಲ್ಲಿ ಪೂವಕ್ಕನ ಕಾಲಿನಲ್ಲಿ ನೀರು ತುಂಬಿಕೊಂಡು ನೋವು ಕಾಣಿಸಿತ್ತು. ಈ ಬಗ್ಗೆ ಸ್ಕ್ಯಾನಿಂಗ್ಗಾಗಿ ವೆನ್ಲಾಕ್ಗೆ ಕರೆದೊಯ್ದು ಬಳಿಕ ಮತ್ತೆ ಲೇಡಿಗೋಷನ್ಗೆ ಕರೆತಂದು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಪೂವಕ್ಕನ ಪರಿಸ್ಥಿತಿ ಬಗ್ಗೆ ಮನೆಮಂದಿ ವೈದ್ಯರಲ್ಲಿ ವಿಚಾರಿಸಿದರೂ ವೈದ್ಯರು ಪೂರಕ ಮಾಹಿತಿ ನೀಡುತ್ತಿರಲಿಲ್ಲ ಎನ್ನಲಾಗಿದೆ.
 
 
ಕಳೆದ ಮೇ 5 ರಂದು ಪರಿಸ್ಥಿತಿ ಉಲ್ಭಣಿಸಿ ಕಾಲಿನಲ್ಲಿ ಕೀವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು ಕೂಡಲೇ ವೆನ್ಲಾಕ್ಗೆ ದಾಖಲಿಸುವಂತೆ ವೈದ್ಯರು ತಿಳಿಸಿದ್ದು, ಅದರಂತೆ ಮನೆಮಂದಿ ವೆನ್ಲಾಕ್ಗೆ ಕರೆತಂದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಪೂವಕ್ಕ ಗುರುವಾರ ರಾತ್ರಿ ಮೃತಪಟ್ಟಿದ್ದರು.
 
ಪೂವಕ್ಕ ಪರಿಶಿಷ್ಟ ಜಾತಿಗೆ ಸೇರಿದವಳು ಎನ್ನುವ ಕಾರಣದಿಂದ ವೈದ್ಯರು ಅಸಡ್ಡೆ ತೋರಿದ್ದಾರೆ ಎಂದು ಮನೆಮಂದಿ ಆರೋಪಿಸಿದ್ದು ವೈದ್ಯರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಗೆ ದಲಿತ ಸಮಘಟನೆಗಳೂ ಬೆಂಬಲ ನೀಡಿದ್ದವು. ಕೆಲಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತಾದರೂ ಪೊಲೀಸರು ಸಕಾಲದಲ್ಲಿ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಘಟನಾ ಸ್ಥಳಕ್ಕೆ ಶಾಸಕ ಜೆ.ಆರ್.ಲೋಭೋ ಭೇಟಿ ನೀಡಿದ್ದರು. 
 
ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕಿ ಡಾ. ಶಕುಂತಳಾ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಮಾತ್ರವಲ್ಲದೆ ಅವರ ಕರ್ತವ್ಯಲೋಪಗಳ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನೂ ರಚಿಸಲಾಗಿದೆ ಎಂದು ತಿಳಿದು ಬಂದಿದೆ..
More in this category: « ಬೈಕ್ ಸ್ಕಿಡ್ ಆಗಿ ಚರಂಡಿಗೆ ಬಿದ್ದು ಇಬ್ಬರು ಯುವಕರಿಗೆ ಗಾಯ ಚೌಡೇಶ್ವರಿದೇವಿ ದೇವಸ್ಥಾನದ ಸಮುದಾಯ ಭವನ 10 ಲಕ್ಷ ರೂಪಾಯಿ ಭರವಸೆ: ಜೆ. ಆರ್. ಲೋಬೊ »
Tweet