ಮಂಗಳೂರು

ಸರಿಸಾಠಿಯಿಲ್ಲದ ಚಾಲಿಪೋಲಿಲು 200 ದಿನ:ತುಳು ಸಿನಿಮಾರಂಗದಲ್ಲೊಂದು ಹೊಸ ದಾಖಲೆ

  • Published in ಮಂಗಳೂರು
  • Read 33 times
  • Comments::DISQUS_COMMENTS
ಮಂಗಳೂರು: ಸುಮಾರು 200 ದಿನಗಳ ಹಿಂದೆ ತುಳುವಿನಲ್ಲಿ ಸಿನಿಮಾವೊಂದು ಬಿಡುಗಡೆಯಾಗುವಾಗ ಅದು ತುಳು ಸಿನಿಮಾ ರಂಗದಲ್ಲಿಯೇ ಒಂದು ಚಾರಿತ್ರಿಕ ದಾಖಲೆ ಮಾಡುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಇದು ಹೊಸತನದಿಂದ ಕೂಡಿದ ಸಿನಿಮಾ, ನೀವೆಲ್ಲರೂ ನೋಡಲೇಬೇಕಾದ ಅತ್ಯುತ್ತಮ ಗುಣಮಟ್ಟದ ಸಿನಿಮಾ ಎಂದು ಆಗ ಪ್ರಚಾರ ಮಾಡಲಾಗುತ್ತಿತ್ತು. ಸಿನಿಮಾವೊಂದು ಬಿಡುಗಡೆಯಾಗುವ ಹೊತ್ತಿನಲ್ಲಿ ಇಂಥ ಪ್ರಚಾರ ಸಹಜವೇ. ಹಾಗಿದ್ದರೂ ಪ್ರಚಾರವನ್ನು ಬದಿಗಿರಿಸಿ ಸಿನಿಮಾ ಪ್ರಿಯರು ಸಾಮಾನ್ಯ ನಿರೀಕ್ಷೆಯಿಂದ ಈ ಸಿನಿಮಾವನ್ನು ವೀಕ್ಷಿಸಿದ ಬಳಿಕ ಹೇಳಿದ್ದೊಂದೇ ಮಾತು - ಅದ್ಭುತ ಸಿನಿಮಾ. ಇದೊಂದು ಹೊಸ ದಾಖಲೆ ಬರೆಯುವುದು ಖಚಿತ ಎಂದು. ಆ ಮಾತು ಈಗ ನಿಜವಾಗುತ್ತಿದೆ.
 
ಜಯಕಿರಣ ಫಿಲ್ಮ್ಸ್ ಬ್ಯಾನರ್‍ನಡಿಯಲ್ಲಿ ಪ್ರಕಾಶ್ ಪಾಂಡೇಶ್ವರ ಅವರ ನಿರ್ಮಾಣ ಮತ್ತು ಯುವ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಅವರು ಹೊಸತನದ ನಿರ್ದೇಶನದಲ್ಲಿ ಮೂಡಿಬಂದ ಚಾಲಿಪೋಲಿಲು ತುಳುಸಿನಿಮಾ ಈಗ ಮೇ 18ಕ್ಕೆ 200 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಈ ಹಿಂದೆ ತುಳುವಿನಲ್ಲಿ ಮಾಡಿರದ ಒಂದು ದಾಖಲೆ ಇದು. ಮುಂದೆ ಇಂಥ ಸಾಧನೆಯನ್ನು ನಿರೀಕ್ಷಿಸುವುದೂ ಕಷ್ಟ.

ಚಾಲಿಪೋಲಿಲು ಆರಂಭದಿಂದಲೂ ಗಮನ ಸೆಳೆಯುತ್ತಾ, ದಾಖಲೆ ಬರೆಯುತ್ತಾ ಬಂದ ಸಿನಿಮಾ. ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಈ ಸಿನಿಮಾದ ಗುಣಮಟ್ಟ ಮಲಯಾಳಿ ಸಿನಿಮಾದಂತಿದೆ. 5 ಚಿತ್ರಮಂದಿರಗಳಲ್ಲಿ 75 ದಿನಗಳ ಪ್ರದರ್ಶನ ಕಂಡಿರುವ ಇದು ಮೂರು ಥಿಯೇಟರ್‍ಗಳಲ್ಲಿ ಶತಕದ ದಾಖಲೆ ಬರೆದಿದೆ. ಈ ಮೂರರಲ್ಲಿ ಎರಡು ಮಲ್ಟಿಪ್ಲೆಕ್ಸ್ ಎಂಬುದು ಗಮನೀಯ ಸಂಗತಿ. ಈಗ ಪಾಂಡೇಶ್ವರದ ಪಿವಿಆರ್‍ನಲ್ಲಿ ದ್ವಿಶತಕ ಬಾರಿಸಿದೆ. ಈ ಸಾಧನೆಗಾಗಿ ಚಿತ್ರಮಂದಿರಕ್ಕೆ ಶಹಬ್ಬಾಸ್ ಹೇಳಲೇಬೇಕು.

60 ಲಕ್ಷ ರೂ. ಕಡಿಮೆ ಬಜೆಟ್‍ನ ಈ ಸಿನಿಮಾವು 2 ಕೋ.ರೂ. ಮಿಕ್ಕಿದ ಸಂಗ್ರಹ ಮಾಡಿದ್ದು, ಸಿನಿಮಾಕ್ಕಾಗಿ ಖರ್ಚು ಮಾಡಿರುವ ಹಣ ಮೂರು ವಾರಗಳಲ್ಲಿ ವಾಪಸಾಗಿದೆ. ಕೇರಳದ ಪ್ರಮುಖ ಕೆಮರಾಮ್ಯಾನ್ ಆಗಿರುವ ಉತ್ಪಲ್ ನಾಯನಾರ್ ಅವರ ಕೆಮರಾದಿಂದ ಅದ್ಭುತವಾಗಿ ಸೆರೆ ಹಿಡಿಯಲ್ಪಟ್ಟ ಈ ಸಿನಿಮಾದ ಯಶಸ್ಸಿನಲ್ಲಿ ಅವರ ಕೊಡುಗೆ ವಿಶೇಷವಾದುದು. ತುಳುರಂಗಭೂಮಿಯ ಪ್ರಮುಖ ಕಲಾವಿದರೆಲ್ಲರಿಗೂ ಹೊಸ ಅನುಭವ, ತೃಪ್ತಿ, ಖುಷಿ ನೀಡಿದ ಈ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಲು ಅದರಲ್ಲಿದ್ದ ಹಲವಾರು ಉತ್ತಮ ಅಂಶಗಳು ಮತ್ತು ತುಳುನಾಡಿಗೆ ಹೇಳಿಮಾಡಿಸಿದಂಥ ಅವರ ಕಥಾಶೈಲಿ ಕಾರಣ. ಕೋಮುಸಾಮರಸ್ಯ, ಉತ್ಕøಷ್ಟ ದರ್ಜೆಯ ಹಾಸ್ಯ, ಉತ್ತಮ ಕಥೆ... ಮುಂತಾದವುಗಳೆಲ್ಲವೂ ಸಿನಿಮಾಪ್ರಿಯರಲ್ಲದವರನ್ನೂ ಆಕರ್ಷಿಸಿದ ಕಾರಣವೇ ಇದು ಇಂಥದ್ದೊಂದು ಹೊಸ ದಾಖಲೆ ಮಾಡಲು ಕಾರಣವಾಯಿತು. ಸಿನಿಮಾ ಅಂದರೆ ಹೀಗಿರಬೇಕು ಎಂದು ಹೇಳಿದ ಪ್ರೇಕ್ಷಕರು, ನಾಟಕದವರಿಂದಲೇ ನಾಟಕವಲ್ಲದ ಶ್ರೇಷ್ಠಮಟ್ಟದ ಸಿನಿಮಾ ನಿರ್ಮಾಣ ಮಾಡಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಲು ಚಾಲಿಪೋಲಿಲು ವೇದಿಕೆ ಒದಗಿಸಿತು.

ಅತಿಯಾದ ಸಿನಿಮಾ ಪ್ರಿಯರಂತು ಇದನ್ನು ಎಷ್ಟು ಬಾರಿ ನೋಡಿದ್ದಾರೆ ಎಂಬುದು ಅವರಿಗೇ ಗೊತ್ತಿರಲಿಕ್ಕಿಲ್ಲ. ಟಿಕೆಟ್ ಸಿಗದೆ ವಾಪಸ್ ಹೋದುದರಲ್ಲೂ ಚಾಲಿಪೋಲಿಲು ದಾಖಲೆ ಮಾಡಿದೆ ಎಂದು ಹೇಳಿದರೆ ತಪ್ಪಾಗದು. ಉತ್ತಮ ಸಿನಿಮಾ ಮಾಡಿದರೆ ತುಳುವಿನಲ್ಲೂ ಯಶಸ್ಸು, ಜನಪ್ರಿಯತೆ, ಲಾಭ ಗಳಿಸಬಹುದು ಎಂಬುದನ್ನೂ ಚಾಲಿಪೋಲಿಲು ಸಾಬೀತು ಮಾಡಿದೆ. ಇದರ ಯಶಸ್ಸಿನ ಬಳಿಕ ಸಾಲುಸಾಲು ತುಳು ಸಿನಿಮಾ ನೋಂದಣಿಯಾದವು. ಅವೆಲ್ಲವೂ ಮುಂದಿನ ದಿನಗಳಲ್ಲಿ ತೆರೆಗೆ ಬರಲಿವೆ.

8 ಪ್ರಶಸ್ತಿ ಬಾಚಿಕೊಂಡಿತ್ತು
ಎಲ್ಲರ ನಿರೀಕ್ಷಗಳಿಗೂ ಮೀರಿದ ಸಾಧನೆ ಮಾಡುತ್ತಿರುವ ಚಾಲಿಪೋಲಿಲು ಸಿನಿಮಾಕ್ಕೆ ತುಳು ಸಿನಿಮಾ ಪ್ರಶಸ್ತಿ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ 8 ಪ್ರಶಸ್ತಿ ಸಂದಿವೆ. ಹೊಸಬರು ಮಾಡಿದ ಈ ಸಿನಿಮಾವು ಹೊಸತನದಿಂದಲೇ ಕೂಡಿರುವುದು ಮತ್ತು ಹೊಸಬರಲ್ಲೂ ವಿಶೇಷ ಸಾಮಥ್ರ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಪ್ರಸ್ತುತ ಈ ಸಿನಿಮಾವನ್ನು ರಾಜ್ಯ ಮಟ್ಟದ ಸಿನಿಮಾ ಸ್ಪರ್ಧೆಗೂ ಕಳುಹಿಸಲಾಗಿದೆ.

ಹೊರರಾಜ್ಯದ ನಗರಗಳಲ್ಲೂ ಯಶಸ್ಸು
ಚಾಲಿಪೋಲಿಲು ಕೇವಲ ಕರಾವಳಿಯಲ್ಲಿ ಮಾತ್ರ ಕ್ರಾಂತಿ ಎಬ್ಬಿಸಿದ್ದಲ್ಲ, ಕರ್ನಾಟಕದ ಬೆಂಗಳೂರು ಸೇರಿದಂತೆ ಬೇರೆ ಬೇರೆ ಪ್ರಮುಖ ನಗರಗಳಲ್ಲಿ, ನೆರೆಯ ಕೇರಳದ ಕಾಸರಗೋಡಿನಲ್ಲಿ, ಮಹಾರಾಷ್ಟ್ರದ ಮುಂಬಯಿ, ಪೂನಾದಂಥ ಮಹಾನಗರಗಳಲ್ಲೂ ಪ್ರದರ್ಶನ ಕಂಡಿದೆ. ಅಲ್ಲೆಲ್ಲ ಪ್ರದರ್ಶನಗೊಂಡ ಚಿತ್ರಮಂದಿರಗಳು ತುಂಬಿ ತುಳುಕುತ್ತಿದ್ದವು.

ವಿದೇಶಕ್ಕೆ
ಈಗ ಇದು ಭಾರತದ ಗಡಿ ದಾಟಿ ವಿದೇಶಕ್ಕೂ ಹಾರಿದೆ. ಮೇ 29ರಿಂದ ಬೆಹೆರೆನಿನಲ್ಲಿ ಪ್ರದರ್ಶನ ಕಾಣಲಿದೆ. ಆ ಮೂಲಕ ಅಲ್ಲಿನ ಕಲಾಪ್ರೇಮಿಗಳಿಗೂ ಚಾಲಿಪೋಲಿಲು ಮಜಾ ಕೊಡಲಿದೆ. ತುಳುನಾಡಿನ ಸಿನಿಮಾವೊಂದರ ಸಾಧನೆಗೆ ಅವರೂ ತಲೆದೂಗಲಿದ್ದಾರೆ. ಆ ನಂತರ ದುಬಾಯಿ-ಅಬುದಾಬಿಯಲ್ಲಿ ಪ್ರದರ್ಶನ ಕಾಣಲಿದೆ.

ಮತ್ತೆ ಬರಲಿದೆ ಥಿಯೇಟರ್‍ಗೆ
ಈಗ ಪಾಂಡೇಶ್ವರದ ಪಿವಿಆರ್ ಮಲ್ಟಿಪ್ಲೆಕ್ಸ್‍ನಲ್ಲಿ ಪ್ರದರ್ಶನ ಕಾಣುತ್ತಿರುವ ಚಾಲಿಪೋಲಿಲು ಮೇ 22ರಂದು ನಗರ ಮಧ್ಯದಲ್ಲಿರುವ ಪ್ರಭಾತ್‍ಥಿಯೇಟರ್‍ನಲ್ಲಿ ಬಿಡುಗಡೆ ಕಾಣಲಿದೆ. ಇದು ನಿಜಕ್ಕೂ ವಿಶೇಷ ಮತ್ತು ಸಿನಿಮಾಪ್ರಿಯರಿಗೆ ಖುಷಿಯ ವಿಚಾರ. ಪಿವಿಆರ್‍ನಲ್ಲಿ ಈಗಲೂ ಟಿಕೆಟ್ ಸಿಗುತ್ತಿಲ್ಲ. ಆದ್ದರಿಂದ ಥಿಯೇಟರೊಂದರಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಿ ಎಂದು ಸಾರ್ವಜನಿಕರಿಂದ ಬಂದಿರುವ ಬೇಡಿಕೆ ಹಿನ್ನೆಲೆಯಲ್ಲಿ ಪ್ರಭಾತ್‍ಥಿಯೇಟರ್‍ನಲ್ಲಿ ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ.

ದಬಕ್‍ದಬ ಐಸಾ
ತುಳು ಚಿತ್ರರಂಗದಲ್ಲಿ ಮಹಾನ್ ಸಾಧನೆ ಮಾಡಿರುವ ಜಯಕಿರಣ ಫಿಲ್ಮ್ಸ್‍ನಿಂದ ಮುಂದಿನ ಸೆಪ್ಟಂಬರ್‍ನಲ್ಲಿ ಹೊಸ ಸಿನಿಮಾಕ್ಕೆ ಮುಹೂರ್ತ ನಡೆಯಲಿದೆ. ದಬಕ್‍ದಬಾ ಐಸಾ ಹೆಸರಿನ ಈ ಸಿನಿಮಾದಲ್ಲಿ ಕೂಡಾ ದೇವದಾಸ್ ಕಾಪಿಕಾಡ್, ನವೀನ್ ಪಡೀಲ್ ಭೋಜರಾಜ ವಾಮಂಜೂರು, ಅರವಿಂದ ಬೋಳಾರ್ ಅಭಿನಯಿಸಲಿದ್ದಾರೆ. 2016ರ ಆರಂಭದಲ್ಲಿಯೇ ಬಿಡುಗಡೆಯಾಗುವ ನಿರೀಕ್ಷೆಯಿದೆ.

44ವರ್ಷಗಳ ತುಳು ಚಿತ್ರರಂಗದ ಇತಿಹಾಸದಲ್ಲಿ 52ನೇ ತುಳು ಸಿನಿಮಾ ಚಾಲಿಪೆಪೋಲಿಲು ಪಾಂಡೇಶ್ವರದ ಪಿವಿಆರ್ ಮಲ್ಟಿಪ್ಲೆಕ್ಸ್‍ನಲ್ಲಿ 200 ದಿನಗಳನ್ನು ಪೂರೈಸುವ ಮೂಲಕ ತುಳು ಚಿತ್ರರಂಗದಲ್ಲಿ ಹೊಸದಾಖಲೆಯನ್ನು ಸೃಷ್ಟಿಸಿದೆ. 29ನೇ ವಾರದಲ್ಲಿ ಮುನ್ನುಗುತ್ತಿರುವ ಈ ಸಿನಿಮಾ 30ನೇ ವಾರದಿಂದ ನಗರದ ಮತ್ತೊಂದು ಥಿಯೇಟರ್‍ಗೆ ಲಗ್ಗೆ ಇಡುತ್ತಿದೆ. ತುಳುಸಿನಿಮಾರಂಗದಲ್ಲಿ ಎಲ್ಲಾ ದಾಖಲೆಗಳನ್ನು ಬದಿಗೆ ಸರಿಸಿದ ಚಾಲಿಪೋಲಿಲು ಎಲ್ಲಾ ವರ್ಗದ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.
More in this category: « ಕಥೆಗಳಲ್ಲೂ ಜಾತಿವಾದ, ಸಂಕುಚಿತತೆ ನುಸುಳಿದೆ: ಕಂಜರ್ಪಣೆ ವಿಷಾದನೀಯ ಬಾಲ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಯಿಂದ ಮಕ್ಕಳ ಭವಿಷ್ಯಕ್ಕೆ ಮಾರಕ: »
Tweet