ಬಾಲ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಯಿಂದ ಮಕ್ಕಳ ಭವಿಷ್ಯಕ್ಕೆ ಮಾರಕ:
- Published in ಮಂಗಳೂರು
- Read 39 times
- Comments::DISQUS_COMMENTS
ಮಂಗಳೂರು: ಬಾಲ ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಂಪುಟವು ಅನುಮೋದನೆ ನೀಡಿರುವುದು ಬಹಳ ಆಘಾತಕಾರಿಯಾದ ಬೆಳವಣಿಗೆಯಾಗಿದೆ. ಈ ಕಾಯ್ದೆಯು ಬಾಲ ಕಾರ್ಮಿಕ ಪದ್ಧತಿಗೆ ಪರೋಕ್ಷವಾದ ಬೆಂಬಲ ನೀಡುವ ಮೂಲಕ ಮಕ್ಕಳ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಕರ್ನಾಟಕ ದಕ್ಷಿಣ ಕನ್ನಡ ಘಟಕದ ಜಿಲ್ಲಾಧ್ಯಕ್ಷ ಇಸ್ಮಾಯೀಲ್ ಅಫ್ಹಾಮ್ ಆತಂಕ ವ್ಯಕ್ತಪಡಿಸಿದರು.
ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಎಸ್ ಐ ಓ ವತಿಯಿಂದ ನಡೆದ ಬಾಲಕಾರ್ಮಿಕ ಕಾನೂನು ತಿದ್ದುಪಡಿ ಕ್ರಮವನ್ನು ವಿರೋಧಿಸಿ ನಡೆದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.






ಪ್ರತಿಭಟನೆಯಲ್ಲಿ ಮಾತನಾಡಿದ ಎಸ್ ಐ ಓ ಕರ್ನಾಟಕ ಘಟಕದ ಸಲಹಾ ಸಮಿತಿ ಸದಸ್ಯ ತಲ್ಹಾ ಇಸ್ಮಾಯೀಲ್, ಈಗಾಗಲೇ ಕೇಂದ್ರ ಸಂಪುಟವು ತಂದಿರುವ ತಿದ್ದುಪಡಿಯು ದೇಶದ ಭವಿಷ್ಯಕ್ಕೆ ಮಾರಕವಾಗಲಿದ್ದು, 1993 ಮಾಗ್ನಾ ಕಾರ್ಟ ಸಭೆಯಲ್ಲಿ ಭಾರತ ಕೂಡ ಒಂದು ಭಾಗವಾಗಿದ್ದು, ನಮ್ಮ ದೇಶದಲ್ಲಿ 18 ವರ್ಷದವರೆಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವುದಾಗಿ ಕಾಯಿದೆಗೆ ಸಹಿ ಹಾಕಿದ್ದಾರೆ. ಆದ್ದರಿಂದ 6 ರಿಂದ 14 ವರ್ಷದವರೆಗೆ ಇರುವ ವಯೋಮಿತಿಯನ್ನು 18 ರ ವರೆಗೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಯುಪಿಎ ಸರಕಾರವು ತಂದಂತಹ ಬಾಲಕಾರ್ಮಿಕ ಕಾಯ್ದೆ ತಿದ್ದುಪಡಿ ವಿಧೇಯಕ-2012ನ್ನು ಪರಿಷ್ಕರಿಸುವ ಹಾಗೂ ಪ್ರಭಲಗುಳಿಸುವ ಭರವಸೆಯನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಿ.ಜೆ.ಪಿ ಸರಕಾರವು ನೀಡಿತ್ತು. ಆದರೆ ಅದಕ್ಕಿಂತಲೂ ಮಕ್ಕಳ ವಿರೋಧಿ ಕಾಯ್ದೆ ಜಾರಿ ಮಾಡಲು ಸರಕಾರವು ಈಗ ತುದಿಗಾಲಲ್ಲಿ ನಿಂತಿದೆ. ಇದನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಖಂಡಿಸುತ್ತದೆ ಎಂದರು.
ಮುಕ್ತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ ಮತ್ತು ನೌಕರಿ ನಿಷೇಧದ ವಯೋಮಿತಿಯು ಒಂದಕ್ಕೊಂದು ಪೂರಕವಾದ ವಿಷಯವಾಗಿದ್ದು ಇಂತಹ ಕಾಯ್ದೆಯು ದೇಶದ ಶೈಕ್ಷಣಿಕ ವ್ಯವಸ್ಥೆಗೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಶಾಲೆಯಿಂದ ಹೊರಗುಳಿದ ಹೆಣ್ಣು ಮಕ್ಕಳ ಪ್ರಮಾಣವು ಗಂಡು ಮಕ್ಕಳಿಗಿಂತ ಹೆಚ್ಚಿರುವುದರಿಂದ ಬಾಲಕಿಯರ ಶೈಕ್ಷಣಿಕ ಸುದಾರಣೆಗೆ ಈ ಕಾಯಿದೆಯು ಬಹಳ ಮಾರಕವಾಗಿ ಪರಿಣಮಿಸಲಿದೆ.ಅಷ್ಟುಮಾತ್ರವಲ್ಲದೆ ಈ ಕಾಯ್ದೆ ವಿಶ್ವಸಂಸ್ಥೆಯ ಮಕ್ಕಳ ಹಕ್ಕು ಒಕ್ಕೂಟ (ಯು.ನ್.ಸಿ.ಆರ್.ಸಿ), ರಾಷ್ಟ್ರೀಯ ಮಕ್ಕಳ ಕಾರ್ಯನೀತಿ-2013 ಹಾಗೂ ಅಂತರಾಷ್ಟೀಯ ಕಾರ್ಮಿಕ ಒಕ್ಕೂಟದ ನಿಯಮಾವಳಿಗಳಿಗೆ ವಿರುದ್ಧವಾಗಿದೆ.
ಈ ತಿದ್ದುಪಡಿಯಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಪಾಯಕಾರಿಯಲ್ಲದ ಸರ್ಕಸ್ ಹೊರತು ಪಡಿಸಿ ಕುಟುಂಬಕ್ಕೆ ಸೇರಿದ ಉದ್ದಿಮೆ ಜಾಹಿರಾತು, ಸಿನಿಮಾ, ಧಾರವಾಹಿ, ಕ್ರೀಡೆ ಹಾಗೂ ಇನ್ನಿತ ದೃಶ್ಯ ಶ್ರಾವ್ಯ ಮನೋರಂಜನೆಗಳಲ್ಲಿ ಶಾಲೆಯ ಅವಧಿಯ ನಂತರ ಮತ್ತು ರಜಾ ದಿನಗಳಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಿದೆ. ಇದರಿಂದಾಗಿ ಉದ್ಯೋಗದಾತರಿಗೆ ಮಕ್ಕಳನ್ನು ಶೋಷಿಸಲು ಹಾಗೂ ಸರಕಾರದ ಶಿಕ್ಷೆಯಿಂದ ಪಾರಾಗಲು ಸರಕಾರವು ಕಾನೂನು ಬದ್ಧ ದಾರಿಯನ್ನು ತೆರೆದು ಕೊಟ್ಟಂತಿದೆ. ಬಾಲ ಕಾರ್ಮಿಕತೆ ಆರಂಭವಾಗುವುದು ಮೊದಲು ರಜಾ ದಿನಗಳಿಂದ ಪ್ರಾರಂಭವಾಗಿ ನಂತರ ಅದು ಸಂಪೂರ್ಣ ಶಿಕ್ಷಣವನ್ನೇ ಮೊಟಕುಗೊಳಿಸುವ ಸಾಧ್ಯತೆ ಹೆಚ್ಚಿದೆ. ನೇಯ್ಗೆ, ಹೊಲಿಗೆಯಂತಹ ಕೌಶಲ್ಯಾಭಿವೃದ್ಧಿಗೆ ಪೂರಕವಾದ ವಾತವರಣ ಶಾಲೆಯಲ್ಲಿ ನೀಡಬೇಕೆ ಹೊರತು ಅದಕ್ಕಾಗಿ ಮಕ್ಕಳನ್ನು ಉದ್ಯೋಗಕ್ಕೆಂದು ಪ್ರೇರೇಪಿಸುವುದಾದರೆ ಶೋಷಣೆಯ ಹಲವಾರು ದಾರಿಯನ್ನು ಉದ್ಯೋಗದಾತರಿಗೆ ನೀಡಿದಂತಾಗುವುದು. ಇದು ದೈಹಿಕ ಶೋಷಣೆ, ಕಡಿಮೆ ಸಂಬಳ, ಲೈಂಗಿಕ ಕಿರುಕುಳ ಮೊದಲಾದ ಮಾನಸಿಕ ಹಾಗೂ ದೈಹಿಕ ಶೋಷಣೆಗೆ ಅವಕಾಶ ಒದಗಿಸಿದಂತಾಗುತ್ತದೆ ಎಂದು ತಿಳಿಸಿದರು.
ಎಸ್ ಐ ಓ ಮಂಗಳೂರು ನಗರ ಅಧ್ಯಕ್ಷ ಮಿಸ್ ಅಬ್ ಬೆಂಗ್ರೆ , ಎಸ್ ಐ ಓ ನ ವಿವಿಧ ಬೇಡಿಕೆಗಳನ್ನು ಮಂಡಿಸಿದರು.
• ಸರಕಾರವು 18 ವರ್ಷದವರೆಗೆ ಎಲ್ಲಾ ರೀತಿಯ ಬಾ ಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಬೇಕು.
• ವಿಶ್ವಸಂಸ್ಥೆಯ ಮಕ್ಕಳ ಹಕ್ಕು (ಯು.ಎನ್.ಸಿ.ಆರ್.ಸಿ) ಹಾಗೂ ರಾಷ್ಟ್ರೀಯ ಮಕ್ಕಳ ಕಾರ್ಯನೀತಿ 2013ರ ನಿಯಮಗಳಿಗೆ ಪೂರಕವಾಗಿ ಈ ಕಾಯ್ದೆಯನ್ನು ಪರಿಷ್ಕರಿಸಬೇಕು.
• 18 ವರ್ಷದ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡಲು ಸರಕಾರವು ಶಾಸನ ಬದ್ಧವಾಗಬೇಕು.
ಪ್ರತಿಭಟನಾ ಸಭೆಯಲ್ಲಿ ಎಸ್ ಐ ಓ ಕರ್ನಾಟಕ ಘಟಕದ ಸಲಹಾ ಸಮಿತಿ ಸದಸ್ಯ ರಫೀಕ್ ಬೀದರ್, ದ.ಕ. ಘಟಕದ ಜಿಲ್ಲಾ ಜೊತೆ ಕಾರ್ಯದರ್ಶಿ ಡಾ. ಝೈನುದ್ದೀನ್ ಉಳ್ಳಾಲ, ನಗರ ಕಾರ್ಯದರ್ಶಿ ಅಮಾನ್, ಉಳ್ಳಾಲ ಘಟಕಾಧ್ಯಕ್ಷ ಮನ್ಸೂರ್ ಸಿ.ಎಚ್, ನಿಝಾಮ್ ಉಳ್ಳಾಲ, ಸೈಫುಲ್ಲಾ ಬೆಂಗ್ರೆ, ಇರ್ಫಾನ್ ಕುದ್ರೋಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Tweet