ಮಂಗಳೂರು

ಗ್ರಾಮ ಪಂಚಾಯತ್ ದರ್ಬಾರ್ ಯಾರಿಗೆ ಇಂದು ನಿರ್ಧಾರ

  • Published in ಮಂಗಳೂರು
  • Read 21 times
  • Comments::DISQUS_COMMENTS
ಮಂಗಳೂರು : ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು ಜನಾದೇಶ ಯಾರ ಪಾಲಿಗೆ ಇದೆ ಎಂಬುದು ಸ್ವಲ್ಪಹೊತ್ತಿನಲ್ಲೇ ಫಲಿತಾಂಶ ಒಂದೊಂದಾಗಿ ಬಹಿರಂಗಗೊಳ್ಳಲಿದೆ.
      
         
ದ.ಕ. ಜಿಲ್ಲೆಯ 227 ಗ್ರಾಮಪಂಚಾಯತ್ಗಳ 3,288 ಸ್ಥಾನಗಳಿಗೆ ನಡೆದಿರುವ ಚುನಾವಣೆಯ ಎಣಿಕೆ ನಡೆಯುತ್ತಿದ್ದು 7,619 ಮಂದಿ ಸ್ಪರ್ಧಿಸಿದ್ದಾರೆ. 109 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಬೆಳಗ್ಗೆ 6.30ಕ್ಕೆ ಅಧಿಕಾರಿಗಳು ಹಾಗೂ ಎಣಿಕೆ ಸಿಬಂದಿ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಿಸಿ 8 ಗಂಟೆಗೆ ಪ್ರಥಮ ಸುತ್ತಿನ ಎಣಿಕೆ ಪ್ರಾರಂಭವಾಯಿತು. 3ರಿಂದ 4 ಸುತ್ತುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದ್ದು ಪ್ರತಿಯೊಂದು ಸುತ್ತಿನ ಎಣಿಕೆಯ ಬಳಿಕ ಫಲಿತಾಂಶ ಪ್ರಕಟಿಸಲಾಗುವುದು.

ಮಂಗಳೂರಿನಲ್ಲಿ 55 ಗ್ರಾ.ಪಂ.ಗಳ ಮತ ಎಣಿಕೆ ನಂತೂರು ಪಾದುವಾ ಹೈಸ್ಕೂಲ್ನಲ್ಲಿ ನಡೆಯುತ್ತಿದ್ದು ಒಟ್ಟು 951 ಸ್ಥಾನಗಳಿಗೆ 2,287 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಒಟ್ಟು 28 ಕೊಠಡಿಗಳಲ್ಲಿ ತಲಾ 4 ಮೇಜುಗಳಲ್ಲಿ ಎಣಿಕೆ ನಡೆಯುತ್ತಿದೆ.

ಬಂಟ್ವಾಳ ತಾಲೂಕಿನ ಎಣಿಕೆ ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರಂಭವಾಗಿದ್ದು 57 ಗ್ರಾ.ಪಂ.ಗಳ 803 ಸ್ಥಾನಗಳಿಗೆ 1,824 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 18 ಕೊಠಡಿಗಳಲ್ಲಿ 91 ಮೇಜುಗಳಲ್ಲಿ ಎಣಿಕೆ ಸಾಗಲಿದೆ. ಬೆಳ್ತಂಗಡಿ ತಾ| ನ 46 ಗ್ರಾ.ಪಂ.ಗಳ 623 ಸ್ಥಾನಗಳಿಗೆ 1,496 ಮಂದಿ ಸ್ಪರ್ಧಿಸಿದ್ದಾರೆ. ಮತಗಳ ಎಣಿಕೆ ಉಜಿರೆ ಎಸ್ಡಿಎಂ ಪದವಿಪೂರ್ವ ಕಾಲೇಜಿನಲ್ಲಿ ನಡೆಯುತಿದೆ. 15 ಕೊಠಡಿಗಳಲ್ಲಿ 75 ಮೇಜುಗಳನ್ನು ಅಳವಡಿಸಲಾಗಿದೆ.

ಪುತ್ತೂರು ತಾಲೂಕಿನ 41 ಗ್ರಾ.ಪಂ.ಗಳ 597 ಸ್ಥಾನಗಳಿಗೆ 1,334 ಮಂದಿ ಸ್ಪರ್ಧಿಸಿದ್ದಾರೆ. ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮತಗಳ ಎಣಿಕೆ ನಡೆಯುತ್ತಿದ್ದು 80 ಮೇಜುಗಳನ್ನು ಅಳವಡಿಸಲಾಗಿದೆ.

ಸುಳ್ಯ ತಾಲೂಕಿನ 28 ಗ್ರಾ.ಪಂ.ಗಳ 314 ಸ್ಥಾನಗಳಿಗೆ 678 ಮಂದಿ ಸ್ಪರ್ಧಿಸಿದ್ದಾರೆ. ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಮತಗಳ ಎಣಿಕೆ ನಡೆಯುತ್ತಿದೆ. 14 ಕೊಠಡಿಗಳಲ್ಲಿ 40 ಮೇಜುಗಳನ್ನು ಹಾಕಲಾಗಿದೆ.ಮತ ಎಣಿಕೆ ಕೇಂದ್ರಗಳಲ್ಲಿ ಭಾರೀ ಜನಸಂದಣಿ ಏರ್ಪಟ್ಟಿದ್ದು ಬಿಗು ಪೊಲೀಸ್ ಭದ್ರತೆ ಹಾಕಲಾಗಿದೆ.
More in this category: « ಬೋಂದೆಲ್: ಯುವಕನಿಗೆ ಚೂರಿ ಇರಿತ ನದಿಗೆ ಉರುಳಿದ ಬೈಕ್: ಸವಾರ ಸಾವು »
Tweet