Menu

ಬಂಟ್ವಾಳ;ಸಿಡಿಲಿನ ಬಡಿತಕ್ಕೆ ಪಾಣೆಮಂಗಳೂರು ಬಳಿ ಒರ್ವ ಯುವಕ ಮೃತ

  • Published in ಬಂಟ್ವಾಳ
  • Read 36 times
  • Comments::DISQUS_COMMENTS
ಬಂಟ್ವಾಳ: ತಾಲೂಕಿನಾದ್ಯಂತ ಸೋಮವಾರ ಸಿಡಿಲು ಮಿಂಚು, ಗಾಳಿ ಸಹಿತ ಧಾರಾಕಾರ ಮಳೆ ಸುರಿದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸಿಡಿಲಿನ ಬಡಿತಕ್ಕೆ ಪಾಣೆಮಂಗಳೂರು ಬಳಿ ಒರ್ವ ಯುವಕ ಮೃತಪಟ್ಟರೆ ಕಳ್ಳಿಗೆ ಗ್ರಾಮದ ಕುಪ್ಪಿಲ ಎಂಬಲ್ಲಿ ಮಾವಿನ ಮರ ರೈಲ್ವೇ ಹಳಿಗೆ ಉರುಳಿ ಬಿದ್ದು ಬೆಂಗಳೂರು- ಮಂಗಳೂರು ಪ್ಯಾಸೆಂಜರ್ ರೈಲು ಸಂಚಾರ ಎರಡು ಗಂಟೆಗಳ ಕಾಲ ಸ್ಥಗಿತಗೊಂಡಿತು. 
 
ಸೋಮವಾರ ಸಂಜೆ  ಬಳಿಕ ಮಳೆ ಪ್ರಾರಂಭಗೊಂಡು ಧಾರಾಕಾರವಾಗಿ ಸುರಿದಿದೆ. ಸುಮಾರು ಒಂದು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಜನರು ತೊಂದರೆ ಪಡುವಂತಾಯಿತು. ಬಿ.ಸಿ.ರೋಡು ಕೆಸರಿನ ಕೊಂಪೆಯಾಗಿ ಜನರು ನಡೆದಾಡಲು ತೊಂದರೆ ಪಡುವಂತಾಯಿತು. ವಿದ್ಯುತ್‍ಸಂಪರ್ಕದಲ್ಲೂ ವ್ಯತ್ಯಯ ಉಂಟಾಯಿತು.
 
ಯುವಕ ಬಲಿ:
ಮಾವಿನ ಹಣ್ಣು ಹೆಕ್ಕಲು ಹೋಗಿದ್ದ ಪಾಣೆಮಂಗಳೂರು ಬಳಿಯ ಬಂಗ್ಲೆಗುಡ್ಡೆ ನಿವಾಸಿ ಇಸುಬು ಎಂಬವರ ಪುತ್ರ ಅಬೂಬಕ್ಕರ್ ಸಿದ್ದೀಕ್ (16) ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಮನೆ ಸಮೀಪದ ಮರದಡಿ ಮಾವಿನ ಹಣ್ಣು ಹೆಕ್ಕುತ್ತಿದ್ದಂತೆಯೇ ಏಕಾಏಕಿ ಬಡಿದ ಸಿಡಿಲು ಸಿದ್ದೀಕ್‍ನ ಮೇಲೆ ಅಪ್ಪಳಿಸಿ ಗಂಭೀರ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತ ಸಿದ್ದೀಕ್ ಸ್ಥಳೀಯ ಶಾಲೆಯೊಂದರ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯಾಗಿದ್ದ. ಪರೀಕ್ಷೆ ಬರೆದಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಸಿದ್ದೀಕ್‍ನ ಮನೆಗೆ ತಹಸೀಲ್ದಾರ್ ಪುರಂದರ ಹೆಗ್ಡೆ ಭೇಟಿ ನೀಡಿದ್ದಾರೆ.
 
ರೈಲು ಸಂಚಾರ ಸ್ಥಗಿತ:
 
ಕಳ್ಳಿಗೆ ಗ್ರಾಮದ ಕುಪ್ಪಿಲ ಎಂಬಲ್ಲಿ ನೂರಾರು ವರ್ಷಗಳಷ್ಟು ಹಳೆಯದಾದ ಮಾವಿನ ಮರವೊಂದು ರೈಲ್ವೇ ಹಳಿಯ ಮೇಲೆ ಬಿದ್ದು ಬೆಂಗಳೂರು- ಮಂಗಳೂರು ಪ್ಯಾಸೆಂಜರ್ ರೈಲು ಸಂಚಾರ ಎರಡು ಗಂಡೆಗಳ ಕಾಲ ಸ್ಥಗಿತ ಗೊಂಡಿತ್ತು. ಮರ ಉರುಳಿ ಬಿದ್ದ ಕೆಲ ಹೊತ್ತುಗಳ ಬಳಿಕ ಬಿ.ಸಿರೋಡು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ರೈಲು ಮುಂದೆ ಸಾಗಲಾಗದೆ ಅಲ್ಲಿಯೇ ನಿಲ್ಲಬೇಕಾಯಿತು. ಇದರಿಂದಾಗಿ ರೈಲಿನಲ್ಲಿದ್ದ ಸಾವಿರಾರು ಮಂದಿ ಪ್ರಯಾಣಿಕರು ತೊಂದರೆ ಪಡುವಂತಾಯಿತು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕುಪ್ಪಿಲದ ನೇತಾಜಿ ಯುವಕ ಸಂಘದ ಸದಸ್ಯರು ಸುಮಾರು ಎರಡುಗಂಟೆಗಳ ಕಾಲ ಶ್ರಮ ವಹಿಸಿ ಉರುಳಿ ಬಿದ್ದ ಮರವನ್ನು ತೆರವುಗೊಳಿಸುವ ಕಾರ್ಯ ನಡೆಸಿದರು.
   
More in this category: « ಬಂಟ್ವಾಳ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ಲಾರಿ ಢಿಕ್ಕಿ ಹೊಡೆದು ಸ್ಕಾರ್ಪಿಯೋ ಪಲ್ಟಿ »
back to top