Menu

ಗ್ರಾ.ಪಂ ಚುನಾವಣೆ ಸಜ್ಜಾಗುತ್ತಿದೆ ಮೂಡುಬಿದರೆ ಹೋಬಳಿ

  • Published in ಮೂಡಬಿದ್ರೆ
  • Read 56 times
  • Comments::DISQUS_COMMENTS
ಮೂಡುಬಿದರೆ: ಮೇ.29ರಿಂದ ನಡೆಯಲಿರುವ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೂಡುಬಿದರೆ ಹೋಬಳಿಯ 12 ಪಂಚಾಯಿತಿಗಳು ಸಜ್ಜಾಗುತ್ತಿದೆ. ಒಟ್ಟು 193 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 451 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಾಲಡ್ಕ ಹಾಗೂ ಹೊಸ ಗ್ರಾ.ಪಂ ಇರುವೈಲ್‍ನಲ್ಲಿ ತಲಾ ಒಬ್ಬರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ 191 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
 
2 ಹೊಸ ಗ್ರಾ.ಪಂ:
ವಲಯದಲ್ಲಿ ಹಿಂದೆ 10 ಗ್ರಾಮಪಂಚಾಯಿತಿಗಳಿದ್ದು ಈ ಬಾರಿ 2 ಹೊಸ ಇರುವೈಲ್ ಮತ್ತು ವಾಲ್ಪಾಡಿ ಗ್ರಾ.ಪಂ ಸೇರ್ಪಡೆಗೊಳ್ಳುವ ಮೂಲಕ ಒಟ್ಟು 12 ಗ್ರಾಮ ಪಂಚಾಯಿತಿಗಳಿವೆ. ಇರುವೈಲು ಗ್ರಾ.ಪಂನಲ್ಲಿ 15 ಸ್ಥಾನಗಳಿದ್ದು 43 ಮಂದಿ ಕಣದಲ್ಲಿದ್ದಾರೆ, ಶಿರ್ತಾಡಿ ಗ್ರಾ.ಪಂನಿಂದ ಬೇರ್ಪಟ್ಟು ರಚನೆಗೊಂಡಿರುವ ವಾಲ್ಪಾಡಿ ಗ್ರಾ.ಪಂನಲ್ಲಿ 9 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಇಲ್ಲಿ 23 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
 
ನೆಲ್ಲಿಕಾರು ಪಂಚಾಯಿತಿನಲ್ಲಿ 12 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು 29 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದರೆಗುಡ್ಡೆ ಗ್ರಾ.ಪಂನಲ್ಲಿ 12 ಸ್ಥಾನಗಳಿಗೆ 24 ಮಂದಿ ಕಣದಲ್ಲಿ, ಪಡುಮಾರ್ನಾಡಿನಲ್ಲಿ 18 ಸ್ಥಾನಗಳಿಗೆ 36 ಮಂದಿ, ಬೆಳುವಾಯಿಯಲ್ಲಿ 26 ಸ್ಥಾನಗಳಿಗೆ 57 ಮಂದಿ, ಪಾಲಡ್ಕದಲ್ಲಿ 16 ಸ್ಥಾನಗಳಿಗೆ 32 ಮಂದಿ, ಕಲ್ಲಮುಂಡ್ಕೂರಿನಲ್ಲಿ 16 ಸ್ಥಾನಗಳಿಗೆ 42 ಮಂದಿ, ಪುತ್ತಿಗೆ ಗ್ರಾ.ಪಂನಲ್ಲಿ 21 ಸ್ಥಾನಗಳಿದ್ದು 57 ಮಂದಿ ಕಣದಲ್ಲಿ, ತೆಂಕಮಿಜಾರುವಿನಲ್ಲಿ ಒಟ್ಟು 22 ಸ್ಥಾನಗಳಿದ್ದು 46 ಮಂದಿ, ಹೊಸಬೆಟ್ಟು ಗ್ರಾ.ಪಂನಲ್ಲಿ 11ಕ್ಕೆ 25 ಮಂದಿ, ಶಿರ್ತಾಡಿ ಪಂಚಾಯಿತಿ 15 ಸ್ಥಾನಗಳಿದ್ದು 37 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
 
ಗ್ರಾ.ಪಂ ವಿಶೇಷ:
ಹೋವಳಿಯ 12 ಗ್ರಾ.ಪಂ ಗಳು ಈ ಬಾರಿಯ ಚುನಾವಣೆಯಲ್ಲಿ ಒಂದಲ್ಲ ಒಂದು ವಿಶೇಷತೆಗಳಿಂದ ಗಮನಸೆಳೆಯುತ್ತಿದೆ. ನಿಡ್ಡೋಡಿಯಲ್ಲಿ ಸ್ಥಾವರ ಸ್ಥಾಪನೆ ವಿಚಾರದಿಂದ ರಾಜ್ಯದಲ್ಲೇ ಗುರುತಿಸಿಕೊಂಡಿರುವ ಕಲ್ಲಮುಂಡ್ಕೂರು ಗ್ರಾ.ಪಂ.ನಲ್ಲಿ ಹಿಂದೆ ಅಧ್ಯಕ್ಷ,ಉಪಾಧ್ಯಕ್ಷ ಹಾಗೂ ಸದಸ್ಯರಾಗಿರುವವರು ಹೆಚ್ಚಿನ ಪ್ರಮಾಣದಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಪುತ್ತಿಗೆ, ಶಿರ್ತಾಡಿ, ಬೆಳುವಾಯಿ, ತೆಂಕಮಿಜಾರು ಹಾಗೂ ಧರೆಗುಡ್ಡೆ ಗ್ರಾ.ಪಂ ಗಳಲ್ಲೂ ಇದೇ ರೀತಿಯ ಸ್ಪರ್ಧೆ ಏರ್ಪಟ್ಟಿದೆ. ಹೊಸಬೆಟ್ಟು ಗ್ರಾ.ಪಂ ಹಿರಿಯ ಸದಸ್ಯರಾಗಿದ್ದ ವಲೇರಿಯನ್ ಕುಟಿನ್ಹೋ ಈ ಬಾರಿ ಹೊಸ ಗ್ರಾ.ಪಂ ಇರುವೈಲ್‍ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಹೊಸಬೆಟ್ಟು ಗ್ರಾ.ಪಂ.ನಲ್ಲೂ ಸ್ಥಳೀಯ ನಾಯಕರ ನಡುವೆ ತೀವ್ರ ತರಹದ ಹಣಾಹಣಿಯಿದೆ.
 
ಯುವ ಅಭ್ಯರ್ಥಿಗಳ ಜೊತೆ ಹಿರಿಯ ಅಭ್ಯರ್ಥಿಗಳು ಸ್ಪರ್ಧೆಯಲ್ಲಿರುವುದು ಇಲ್ಲಿನ ವಿಶೇಷ. ಗೆಳೆಯರ ನಡುವೆಯೇ ಸ್ಪರ್ಧೆ ನಡೆಯುತ್ತಿರುವ ಪಡುಮಾರ್ನಾಡು ಪಂಚಾಯಿತಿಯಲ್ಲೂ ಹಳೆಯ ಸದಸ್ಯರೂ ಸ್ಪರ್ಧೆಯಲ್ಲಿದ್ದಾರೆ. ಶಿರ್ತಾಡಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಲಕ್ಷ್ಮಣ್ ಸುವರ್ಣ, ಶಿರ್ತಾಡಿಯಿಂದ ಬೇರ್ಪಟ್ಟಿರುವ ಹೊಸ ಪಂಚಾಯಿತಿ ವಾಲ್ಪಾಡಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ನೆಲ್ಲಿಕಾರು ಪಂಚಾಯಿತಿಯ ಉಪಾಧ್ಯಕ್ಷರಾಗಿದ್ದ ಶಶಿಧರ.ಎಂ ನೆಲ್ಲಿಕಾರು ವಾರ್ಡ್ ನಂ.2 ಹಾಗೂ ಮಾಂಟ್ರಾಡಿ 1ನೇ ವಾರ್ಡ್‍ನಲ್ಲಿ ಸ್ಪರ್ಧೆಗೆ ನಿಂತಿದ್ದು, ಒಂದೇ ಅಭ್ಯರ್ಥಿ ಎರಡು ಕಡೆ ಸ್ಪರ್ಧಿಸುತ್ತಿರುವ ಹೋಬಳಿಯ ಏಕೈಕ ಅಭ್ಯರ್ಥಿಯಾಗಿದ್ದಾರೆ.

ಒಂದೇ ಮನೆಯ 3 ಅಭ್ಯರ್ಥಿಗಳು:
ಪಾಲಡ್ಕ ಪಂಚಾಯಿತಿಯಲ್ಲಿ ಒಂದೇ ಮನೆಯ ಮೂರು ಜನ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವುದು ಈ ಬಾರಿಯ ಚುನಾವಣಾ ವಿಶೇಷತೆಗಳಲ್ಲೊಂದು. ಹಿಂದೆ ಪಾಲಡ್ಕ ಪಂಚಾಯಿತಿ ಸದಸ್ಯರಾಗಿದ್ದು, ಬಳಿಕ ಪುತ್ತಿಗೆ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿದ್ದ ಸುಚರಿತ ಶೆಟ್ಟಿ ಈ ಬಾರಿ ಸ್ಪರ್ಧಿಸುತ್ತಿದ್ದಾರೆ. ಅವರ ಪತ್ನಿ, ಪ್ರಸ್ತುತ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿರುವ ಸುನೀತಾ ಸುಚರಿತ ಶೆಟ್ಟಿ, ಅವರ ಸಹೀದರ ಸುಚೀವೃತ ಶೆಟ್ಟಿ ಚುನಾವಣಾ ಕಣದಲ್ಲಿದ್ದಾರೆ. ಸುಚೀವೃತ ಶೆಟ್ಟಿ ಕಡಂದಲೆ 1ನೇ ವಾರ್ಡ್‍ನಿಂದ, ಸುಚರಿತ ಶೆಟ್ಟಿ ಶೆಟ್ಟಿ ಕಡಂದಲೆ 3ನೇ ವಾರ್ಡ್‍ನಿಂದ ಹಾಗೂ ಸನೀತಾ ಶೆಟ್ಟಿ ಪಾಲಡ್ಕ 1ನೇ ವಾರ್ಡ್‍ನಿಂದ ಸುನೀತಾ ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ. ಹಿಂದೆ ತಾ.ಪಂ ಅಧ್ಯಕ್ಷೆಯಾಗಿದ್ದ ಸವಿತಾ ಟಿ.ಎನ್ ಸುಚರಿತ ಶೆಟ್ಟಿ ಸ್ಪರ್ಧೆಸುತ್ತಿರುವ ಕಡಂದಲೇ 3ನೇ ವಾರ್ಡಿನಿಂದ ಸ್ಪರ್ಧಿಸುತ್ತಿರುವುದು ಮತ್ತೊಂದು ವಿಶೇಷ.

ಸಹೋದರರ ಸವಾಲ್:
ಪುತ್ತಿಗೆ ಗ್ರಾ.ಪಂ.ನ ವಾರ್ಡ್ ನಂ.1ರಲ್ಲಿ ಗ್ರಾ.ಪಂ ಸದಸ್ಯ ಶಶಿಧರ.ಪಿ.ನಾಯಕ್ ಹಾಗೂ ಅವರ ಸಹೋದರ
ವಾಸುದೇವ ನಾಯಕ್ ಸ್ಪರ್ಧಿಸುತ್ತಿದ್ದು, ಸಹೋದರರ ನಡುವಿನ ಈ ಸ್ಪರ್ಧೆ ಜನರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಕಣದಲ್ಲಿ 211 ಮಹಿಳೆಯರು!
ಪರಿಶಿಷ್ಟ ಜಾತಿಯ 46, ಪರಿಶಿಷ್ಟ ಪಂಗಡದ 37, ಹಿಂದುಳಿದ ಎ ವರ್ಗದ 101, ಹಿಂದುಳಿದ ಬಿ ವರ್ಗದ 25 ಹಾಗೂ ಸಾಮಾನ್ಯದಿಂದ 242 ಮಂದಿ ಸ್ಪರ್ಧಿಸುತ್ತಿದ್ದಾರೆ. 12 ಪಂಚಾಯಿತಿಗಳಲ್ಲಿ 211 ಮಂದಿ ಮಹಿಳೆಯರು ಸ್ಪರ್ಧಾ ಕಣದಲ್ಲಿದ್ದಾರೆ.
 
 
ಯಶೋಧರ ವಿ.ಬಂಗೇರ 
More in this category: « ಚಲಾವಣೆ ನಿಂತ ವಿದೇಶಿ ಕರೆನ್ಸಿ ಮಾರಾಟ ಅಂಬ್ಯಲೆನ್ಸ್‍ನಲ್ಲಿ ಬಂದ ಮತದಾರ! »
back to top