Menu

ಅಂಬ್ಯಲೆನ್ಸ್‍ನಲ್ಲಿ ಬಂದ ಮತದಾರ!

  • Published in ಮೂಡಬಿದ್ರೆ
  • Read 65 times
  • Comments::DISQUS_COMMENTS
ಮೂಡುಬಿದಿರೆ: ಮತದಾನ ನಾಗರಿಕರ ಹಕ್ಕು. ಇಂತಹ ಅವಕಾಶ ಕಳೆದುಕೊಳ್ಳುವುದು ಸರಿಯಲ್ಲ ಎನ್ನುವ ಸಂದೇಶಕ್ಕೆ ಮಾದರಿಯಾಗಿ ಶುಕ್ರವಾರ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾರರೊಬ್ಬರು ಅಂಬ್ಯುಲೆನ್ಸ್‍ನಲ್ಲಿ ಬಂದು ಮತ ಚಲಾಯಿಸಿದ ಪ್ರಕರಣ ನಡೆದಿದೆ.  
 
ಪಾಲಡ್ಕ ಗ್ರಾ.ಪಂ ವ್ಯಾಪ್ತಿಯ ಮುಂಡ್ರುದೆಗುತ್ತು ಮಾರ್ಗದ ಮನೆ ನಿವಾಸಿ ಉಮೇಶ್ ಪೂಜಾರಿ(38) ಎಂಬವರು 1 ವರ್ಷ 2 ತಿಂಗಳುಗಳ ಹಿಂದೆ ತೆಂಗಿನ ಮರದ ಬಿದ್ದು ಸೊಂಟದ ಕೆಳಗೆ ಸ್ವಾಧೀನ ಕಳೆದುಕೊಂಡಿದ್ದರು.

ಮೂಡುಬಿದರೆ ಲೊಯಲಾ ಅಂಬ್ಯುಲೆನ್ಸ್ ಮಾಲಕ-ಚಾಲಕ ಅಮಿತ್ ಡಿಸಿಲ್ವಾ ಶುಕ್ರವಾರ ಉಮೇಶ್ ಅವರ ಮನೆಯ ಸಮೀಪ ಹಾದುಹೋಗುವಾಗ ಓಟು ಹಾಕುವುದಿಲ್ಲವೇ ಎಂದು ಕೇಳಿದ್ದೇ ಸರಿ ಓಟು ಹಾಕಲು ಮನಸ್ಸಿದೆ, ಆದರೆ ನಡೆದಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಉಮೇಶ್ ಅಳಲು ವ್ಯಕ್ತಪಡಿಸಿದರಂತೆ.

ಸ್ಥಳೀಯರ ನೆರವಿನೊಂದಿಗೆ ಅಮಿತ್ ಮಧ್ಯಾಹ್ನ 2.30 ವೇಳೆಗೆ ಉಮೇಶ್ ಅವರನ್ನು ತಮ್ಮ ಅಂಬ್ಯುಲೆನ್ಸ್ ಮೂಲಕ ಕೇಮಾರು ಶಾಲೆಯ ಮತಗಟ್ಟೆಗೆ ಕರೆತಂದು ಮತದಾನಕ್ಕೆ ಅವಕಾಶ ಕಲ್ಪಿಸಿ ಮತ್ತೆ ಅವರನ್ನು ಮನೆಗೆ ಕರೆದೊಯ್ದರು.

ಎಲ್ಲೆಡೆ ಬಿರುಸಿನ ಮತದಾನ..
ಮೂಡುಬಿದಿರೆ ವಲಯದ 12 ಗ್ರಾಮ ಪಂಚಾಯತ್‍ಗಳ 65 ಬೂತ್‍ಗಳಲ್ಲಿ ಶಾಂತಿಯುತ ಮತದಾನ ನಡೆದಿದ್ದು ಕೆಲವು ಗ್ರಾಮಗಳಲ್ಲಿ ಮಧ್ಯಾಹ್ನದವರೆಗೆ ವಿರಳ ಸಂಖ್ಯೆಯಲ್ಲಿ ಜನರು ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದರೆ, ಕೆಲವೆಡೆಗಳಲ್ಲಿ ಬೆಳಿಗ್ಗೆಯೇ ಬಿರುಸಿನ ಮತದಾನ ನಡೆಯಿತು.

ಮಧ್ಯಾಹ್ನದ ವೇಳೆಗೆ ಶಿರ್ತಾಡಿ ಜಿ.ಪಂ ಕ್ಷೇತ್ರದಲ್ಲಿ ಮಳೆಯ ಸಿಂಚನವಾಗಿದ್ದು ಮತಗಟ್ಟೆಯಲ್ಲಿದ್ದ ಕೆಲವು ಕಾರ್ಯಕರ್ತರು ತಾವು ಬಳಸಿದ್ದ ಟೇಬಲನ್ನೇ ಎತ್ತಿ ಹಿಡಿದು ಮುಂಗಾರು ಮಳೆಯಲ್ಲಿ ತೊಯ್ದರು. ಬೆಳುವಾಯಿ ಗ್ರಾ. ಪಂಚಾಯತ್‍ನ ಕೆಲವೆಡೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ಮತ ಚಲಾಯಿಸಲು ನೀಡಿದ ಗುರುತು ಚಿಹ್ನೆಗೆ ಸರಿಯಾಗಿ ಶಾಯಿ ತಾಗದಿರುವುದರಿಂದ ತಮ್ಮ ಮತ ಸರಿಯಾಗಿ ಚಲಾವಣೆಯಾಗಿದೆಯೋ ಇಲ್ಲವೋ ಎಂಬ ಆತಂಕ ಮತದಾರರಲ್ಲಿ ಉಂಟಾಗಿತ್ತು.

ಬೆಳಕಿನ ಸಮಸ್ಯೆ
ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉರ್ದು ಶಾಲೆಯಲ್ಲಿ ಗುರುವಾರ ಚುನಾವಣಾ ಅಧಿಕಾರಿಗಳು ಬೀಗ ಒಡೆದು ಒಳ ಪ್ರವೇಶಿಸಿ ಚುನಾವಣಾ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಎದುರಾಗಿತ್ತು. ಇಲ್ಲಿ ಸ್ವಚ್ಛತೆ ಹಾಗೂ ಬೆಕಿನ ಸಮಸ್ಯೆಯೂ ಇದ್ದುದರಿಂದ ಸ್ವಲ್ಪ ಗೊಂದಲದ ಪರಿಸ್ಥಿತಿ ಉಂಟಾಗಿದ್ದು ಬಳಿಕ ರಾಜಕೀಯ ಪಕ್ಷದ ಕಾರ್ಯಕರ್ತರು ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಸುಗಮ ಮತದಾನಕ್ಕೆ ಅನುವುಮಾಡಿಕೊಟ್ಟರು. ಇಲ್ಲಿ ಎರಡು ಮತಗಟ್ಟೆಗಟ್ಟೆಗಳ ಜನರಿಗೆ ಒಂದೇ ಕೊಠಡಿಯೊಳಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಯಿತು.

ವೃದ್ಧರ ಉತ್ಸಾಹ
102ರ ಹರೆಯದ ವೃದ್ಧೆ ಮುತ್ತು ಶೆಡ್ತಿ ಅವರು ತನ್ನ ಕಾಲು ನೋವನ್ನು ಲೆಕ್ಕಿಸದೆ ತನ್ನ ಮಗನ ಜತೆ ಬಂದು ದರಗುಡ್ಡೆ ಗ್ರಾಮ ಪಂಚಾಯತ್‍ನ ಬಳಿಯ ಶಾಲೆಯಲ್ಲಿ ಮತಚಲಾಯಿಸಿದರೆ, ಹೊಸಬೆಟ್ಟು ಗ್ರಾಮ ಪಂಚಾಯತ್‍ನಲ್ಲಿ 87ರ ಹರೆಯದ ಲಾರೆನ್ಸ್ ಮೆಂಡೋನ್ಸಾ ಮತ್ತು ಪತ್ನಿ 83ರ ಹರೆಯದ ಎಲಿಜಾ ಮೆಂಡೋನ್ಸಾ ಪುತ್ರ ವಿಲ್ಫ್ರೆಡ್ ಮೆಂಡೋನ್ಸಾರ ನೆರವಿನೊಂದಿಗೆ ಹಾಗೂ 83ರ ಹರೆಯದ ತೋಮಸ್ ಪಿರೇರಾ ಅವರು ಶಿರ್ತಾಡಿ ಮೌಂಟ್ ಕಾರ್ಮೆಲ್ ಸ್ಕೂಲ್‍ನ ಮತಗಟ್ಟೆಗೆ ತನ್ನ ಮಗನ ಜತೆ ಬಂದು ಮತ ಚಲಾಯಿಸುವ ಮೂಲಕ ಕಿರಿಯರಿಗೆ ಮಾದರಿಯಾದರು.
More in this category: « ಗ್ರಾ.ಪಂ ಚುನಾವಣೆ ಸಜ್ಜಾಗುತ್ತಿದೆ ಮೂಡುಬಿದರೆ ಹೋಬಳಿ ವಧು ಬೇಕಾಗಿದೆ ಎಂದು ಜಾಹೀರಾತು ನೀಡಿ ಮಹಿಳೆಗೆ ಕಿರುಕುಳ »
back to top