Menu

ಭಕ್ತಿ ಸಡಗರದೊಂದಿಗೆ ಸಂಪನ್ನಗೊಂಡ ಕಾರ್ಕಳ ಮಾರಿಪೂಜೆ

  • Published in ಕಾರ್ಕಳ
  • Read 21 times
  • Comments::DISQUS_COMMENTS
ಕಾರ್ಕಳ: ಜಾತಿ ಎಲ್ಲೆ ಮೀರಿ ಭಕ್ತಿ-ಸಂಭ್ರಮದೊಂದಿಗೆ ಕಾರ್ಕಳ ಮಾರಿಪೂಜೆ ಬುಧವಾರ ಸಂಜೆ ಸಂಪನ್ನಗೊಂಡಿತು.
 
 
 
 
  
ಮಂಗಳವಾರ ನಸುಕಿನ ಜಾವದಲ್ಲಿ ಆಳೆತ್ತರದ ಮಾರಿಯಮ್ಮನ ವಿಗ್ರಹವನ್ನು ಮೂರು ಮಾರ್ಗ ಪರಿಸರದಲ್ಲಿ ಇರುವಂತಹ ಕಾರಣಿಕ ಸ್ಥಳದಲ್ಲಿ ಆರಾಧಿಸಲಾಗಿತು.ಅದೇ ದಿನ ರಾತ್ರಿ ದೇವರ ವಿಗ್ರಹವು ಮಾರಿಯಮ್ಮನ ದೇವಸ್ಥಾನಕ್ಕೆ ತಂದರು. ವಿಪ್ರರು ದೇವತಾಕಾರ್ಯದ ನೇತೃತ್ವವಹಿಸಿದರು.

ಬುಧವಾರ ಸಂಜೆ 6.00ರ ವೇಳೆಗೆ ಮಹಾಮಂಗಳಾರತಿಯ ಬಳಿಕ ಶೋಭಾಯಾತ್ರೆ ಆರಂಭಗೊಂಡಿತು. ಇದರ ದೃಶ್ಯಾವಳಿ ನೋಡುಗರ ಮನ ಮುದಗೊಳಿಸಿತು. ಉಚ್ಚಂಗಿ ಪ್ರತಿರೂಪದ ಪಾದುಕೆಯ ಪೀಠವನ್ನು ರಾಣಿ(ಸಮಾಜದಲ್ಲಿ)ಯರಲ್ಲಿ ಗುರುತಿಸುವ ಓರ್ವ ವ್ಯಕ್ತಿ ತಲೆಯ ಮೇಲೆ ಹೊತ್ತು ಸಾಗಿದ ಬಳಿಕವಷ್ಟೇ ಮಾರಿಯಮ್ಮನ ವಿಗ್ರಹದ ಸಾಗಿಸುವುದು, ಮಾರಿದೇವರ ಪಲ್ಲಕಿಗೆ ಶೆಟ್ಟಿಗಾರರು ಹೆಗಲು ನೀಡುವುದು, ದೇವಾಡಿಗರು ವಾದ್ಯಘೋಷವನ್ನು ಮೊಳಗಿಸುವುದು, ಆದಿವಾಸಿ ಜನಾಂಗದವರು ಇಲ್ಲೂ ತಮ್ಮ ಸಂಸ್ಕøತಿ ಪ್ರತಿಬಿಂಬವಾಗಿ ಡೋಲು ಬಾರಿಸುವುದು, ಇದಕ್ಕೆಲ್ಲ ಮೆರಗು ನೀಡುವ ಜವಾಬ್ದಾರಿಯನ್ನು ರಾಮಕ್ಷತ್ರಿಯ ಜನಾಂಗದವರು ನಿರ್ವಹಿಸಿಕೊಂಡು ಬಂದಿರುವುದು ಇಲ್ಲಿನ ವಿಶೇಷ ಸಂಪ್ರದಾಯಗಳಾಗಿದ್ದು ಅದು ಇಲ್ಲಿ ಚಾಚು ತಪ್ಪದೇ ನಡೆದುಕೊಂಡು ಬಂದಿದೆ. ಪ್ರತಿಯೊಂದು ಸಮಾಜದವರಿಗೆ ಈ ಉತ್ಸವಾದಿ ಧಾರ್ಮಿಕ ಕಾರ್ಯಕ್ರಮದಲ್ಲಿ ಮಣೆ ಹಾಕಿರುವುದು ವಿಶೇಷವಾಗಿದೆ.

ಶೋಭಾಯಾತ್ರೆ ಸೀಳೆಹಾಕಿ ಕುಣಿದು ಕುಪ್ಪಳಿಸುವ ಯುವ ಜನಾಂಗದ ತಂಡೋಪತಂಡವೇ ಕಂಡುಬಂತು. ಪ್ರಮುಖ ಬೀದಿಯ ಇಕ್ಕೆಲೆಗಳಲ್ಲಿ ಹಾಗೂ ಕಟ್ಟಡದ ಮೇಲ್ಬಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದರು. ಅನಂತಶಯನ ದೇವಳ ಮಾರ್ಗವಾಗಿ ರಾಮಸಮುದ್ರದ ಕಾಡಿನಲ್ಲಿ ಮಾರಿಯನ್ನು ವಿಸರ್ಜನೆ ಮಾಡಿರುವುದರೊಂದಿಗೆ ಮಾರಿಪೂಜೆ ಸಂಪನ್ನಗೊಂಡಿದೆ.

ಮಾರಿಯಮ್ಮ ದೇವಳ ಹಾಗೂ ಇತಿಹಾಸ
ಇಕ್ಕೇರಿ ನಾಯಕನ ಕಾಲದಲ್ಲಿ ಕೋಟೆ ಎಲ್ಲಿಲ್ಲಿ ನಿರ್ಮಿಸಲಾಗಿತ್ತೋ ಅದರ ಪಕ್ಕದಲ್ಲಿ ಹನುಮಂತ,ಮಾರಿಯಮ್ಮ ದೇವಸ್ಥಾನಗಳನ್ನು ನಿರ್ಮಿಸಲಾಗಿತ್ತು. ಕೋಟೆಯ ರಕ್ಷಣೆಗೆಂದು ಗಮಿಸಿರುವ ಜನಾಂಗದವರು ಈ ದೇವರ ಆರಾಧನೆಯನ್ನು ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಇಂಬು ನೀಡಿರುವಂತೆ ಕಾರ್ಕಳ ಮಾರಿಯಮ್ಮ ದೇವಸ್ಥಾನದ ಪ್ರಮುಖ ಆಡಳಿತವು ಇಂದಿಗೂ ರಾಮಕ್ಷತ್ರಿಯ ಜನಾಂಗದ ಹಿಡಿತದಲ್ಲಿ ಇರುವುದು ಗಮನಾರ್ಹವಾಗಿದೆ.

ಇಕ್ಕೇರಿ ನಾಯಕನ ಕಾಲದಲ್ಲಿ ಚಿತ್ರದುರ್ಗ ರಾಣೆಬೆನ್ನೂರಿನಿಂದ ಕೋಟೆ ರಕ್ಷಣೆಗೆಂದು ಕಾರ್ಕಳಕ್ಕೆ ಬಂದಿರುವ ಮತ್ತೊಂದು ಜನಾಂಗವೇ ರಾಣೆಯರು. ಪ್ರಸ್ತುತ ಇವರು ದಲಿತ ಸಮುದಾಯದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಆರಾಧಿಸಿಕೊಂಡು ಬಂದಿರುವ ಉಚ್ಚಂಗಿ ಮಾರಿಯಮ್ಮನ ಗುಡಿ ಇದೇ ಮಾರಿಯಮ್ಮ ದೇವಸ್ಥಾನದ ಎದುರುಗಡೆಯಲ್ಲಿ ಇರುವುದು ಒಂದು ವಿಶೇಷವಾಗಿದೆ. ಎದುರು-ಬದಿರು ಇರುವಂತಹ ಈ ಎರಡು ದೇವರುಗಳು ಸಹೋದರಿಯರು ಎಂಬ ಭಾವನೆಯಲ್ಲಿ ಈ ಪುಣ್ಯಭೂಮಿಯನ್ನು ಎಲ್ಲಾ ಜಾತಿಯವರು ಆರಾಧಿಸಿಕೊಂಡು ಬರುತ್ತಿರುವುದು ಇಲ್ಲಿನ ವಿಶೇಷವಾಗಿದೆ.

ಮಲ್ಲಿಗೆಗೆ ಡಿಮ್ಯಾಂಡ್
ಸರ್ವ ಅಲಂಕೃತೆಯಾಗಿರುವ ಮಾರಿಯಮ್ಮ ದೇವರಿಗೆ ರಕ್ತವರ್ಣ ಬಣ್ಣದ ಸೀರೆ ,ಕೆಂಪುಬಣ್ಣ ಗಾಜಿನ ಬಳೆ, ಮಲ್ಲಿಗೆ ಹೂ ,ಹಿಂಗಾರ ಹೂ ಎಂದರೆ ಬಲು ಇಷ್ಟ ಎಂಬ ನಂಬಿಕೆ ಆಸ್ತಿಕ ಬಾಂಧವರದು. ಹೀಗಾಗಿ ಈ ವಸ್ತುಗಳು ಹರಕೆ ರೂಪದಲ್ಲಿ ದೇವರಿಗೆ ಸಂದಾಯವಾಗಿದೆ. ಅದರಲ್ಲೂ ತುಳುನಾಡಿನ ಮಲ್ಲಿಗೆ ಹೂವಿಗೆ ಎಲ್ಲಿಲ್ಲದ ಬೇಡಿಕೆ ಕಳೆದ ಎರಡು ದಿನಗಳಿಂದ ಕಾರ್ಕಳದಲ್ಲಿ ಕಂಡುಬಂತು. ಮಾರಿಯಮ್ಮನ ವಿಗ್ರಹ ಪೂರ್ತಿ ಮಲ್ಲಿಗೆಯದೇ ಸಿಂಗರ. ಪರಿಸರದಲ್ಲಿ ಅದರದೇ ಗಮ ಗಮ. ಹೀಗಾಗಿ ಮಲ್ಲಿಗೆಗೆ ಭಾರೀ ಬೇಡಿಕೆ ಹೆಚ್ಚಳವಾದ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಮಲ್ಲಿಗೆಗೆ ದುಬಾರಿ ಬೆಲೆ ಇತ್ತು.

ದೇವಳದ ಆಡಳಿತ ಮೊಕ್ತೇಸರು ಮತ್ತು ಮಾರಿಯಮ್ಮ ಸೇವಾ ಸಮಿತಿ ಪದಾಧಿಕಾರಿಗಳು, ಶಾಸಕ ವಿ.ಸುನಿಲ್‍ಕುಮಾರ್, ಕೌನ್ಸಿಲರ್‍ಗಳಾದ ನವೀನ್ ದೇವಾಡಿಗ, ಅಕ್ಷಯ್, ಪ್ರಕಾಶ್ ರಾವ್, ಗಿರಿಧರ್ ನಾಯಕ್, ಸುನಿಲ್‍ಕೋಟ್ಯಾನ್, ಸುಬೋದರಾವ್ ಮೊದಲಾದವರು ಉಪಸ್ಥಿತರಿದ್ದರು.
 
*ಆರ್.ಬಿ.ಜಗದೀಶ್
More in this category: « ಎಸ್.ಎಸ್.ಎಲ್.ಸಿ ಯಲ್ಲಿ ಕ್ರೈಸ್ಟ್‍ಕಿಂಗ್‍ಗೆ ನೂರು ಶೇಕಡ ಫಲಿತಾಂಶ ಕಥೊಲಿಕ್ ಸಭಾ ಕಾರ್ಕಳ ವಲಯ ಸಮಿತಿ ವತಿಯಿಂದ ಭಾರತೀಯ ಪುರಾತತ್ವ ಇಲಾಖೆಗೆ ಮನವಿ ಸಲ್ಲಿಕೆ »
back to top