Menu

ಶಾಸಕರ ಹಸ್ತಕ್ಷೇಪಕ್ಕೆ ಸಾಮಾನ್ಯಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರಿಂದ ಅಕ್ಷೇಪ

  • Published in ಕಾರ್ಕಳ
  • Read 49 times
  • Comments::DISQUS_COMMENTS
ಕಾರ್ಕಳ : ಕ್ಷೇತ್ರದ ಶಾಸಕರು ಪುರಸಭಾ ಅಭಿವೃದ್ಧಿ ಕಾರ್ಯದಲ್ಲಿ ಹಸ್ತಕ್ಷೇಪ ನಡೆಸಿ ಅಭಿವೃದ್ಧಿಗೆ ಕಡಿವಾಣ ಹಾಕುತ್ತಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರು ಆರೋಪಿಸಿ ಶನಿವಾರ ಜರುಗಿದ್ದ ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಹಣೆಗೆ ಕಪ್ಪುಪಟ್ಟಿ ಧರಿಸಿ,ಬಿತ್ತಿಪತ್ರ ಪ್ರದರ್ಶಿಸಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
 
   
ಮಾಸಿಕ ಅಧಿವೇಶನ ಆರಂಭಗೊಳ್ಳುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯ ಶುಭದ ರಾವ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಯೋಜನೆಗಾಗಿ ರಾಜ್ಯ ಸರಕಾರದಿಂದ ಟಾಸ್ಕ್‍ಪೋರ್ಸ್‍ನಡಿ 31 ಲಕ್ಷ ರೂ. ಬಿಡುಗಡೆಯಾಗಿದೆ. ಟಾಸ್ಕ್‍ಪೋರ್ಸ್‍ನ ಸದಸ್ಯರಾದ ಪುರಸಭೆ ಅಧ್ಯಕ್ಷೆ ಹಾಗೂ ಮುಖ್ಯಾಧಿಕಾರಿ ಅವರು ಪ್ರಸ್ತಾವನೆಯನ್ನು ಸಿದ್ದಪಡಿಸಿ ಟಾಸ್ಕ್‍ಪೋರ್ಸ್‍ನ ಅಧ್ಯಕ್ಷರಾದ ಶಾಸಕರಿಗೆ ಕಳುಹಿಸಿಕೊಟ್ಟಿದ್ದಾರೆ. ಶಾಸಕರು ಆ ಪ್ರಸ್ತಾವನೆಯನ್ನು ಬದಲಾಯಿಸಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದರು. ಆದರೆ ಶಾಸಕರ ಪ್ರಸ್ತಾವನೆಯ ವಿರುದ್ದ ಪುರಸಭೆಯ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ, ಆ ಪ್ರಸ್ತಾವನೆಯನ್ನು ಬದಲಾಯಿಸಿ ನೀಡುವಂತೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಮತ್ತೆ ಬದಲಿ ಪ್ರಸ್ತಾವನೆಯನ್ನು ಶಾಸಕರಿಗೆ ನೀಡಲಾಗಿದೆ. 21 ದಿನಗಳಿಂದ ಆ ಕಡತವನ್ನು ಮುಟ್ಟದೆ ಶಾಸಕರು ತನ್ನ ಬಳಿಯೇ ಇಟ್ಟುಕೊಂಡಿದ್ದಾರೆ. ಇದರಿಂದ ಪುರಸಭಾ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದರು.

ಸದಸ್ಯ ಮೊಹಮ್ಮದ್ ಶರೀಫ್ ಮಾತನಾಡಿ, ಪುರಸಭೆಯ ವ್ಯಾಪ್ತಿಯಲ್ಲಿ ಕಾಡುತ್ತಿರುವ ನೀರಿನ ನೈಜಾ ಸಮಸ್ಯೆಗಳನ್ನು ಬದಿಗೊತ್ತಿ, ತಮ್ಮ ಇಚ್ಛೆಗನುಸಾರವಾಗಿ ಪ್ರಸ್ತಾವನೆ ಸಿದ್ದಪಡಿಸಿರುವುದನ್ನು ಖಂಡಿಸುತ್ತೇವೆ ಎಂದರು. ಸದಸ್ಯ ಅಶ್ಪಕ್ ಅಹಮದ್ ಮಾತನಾಡಿ, ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಈ ಹಿಂದೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಬಂಗ್ಲೆಗುಡ್ಡೆ 1ನೇ ವಾರ್ಡುಗೆ 3.50 ಲಕ್ಷ ರೂ. ನೀರಿನ ಕಾಮಗಾರಿಗೆ ಅನುದಾನ ಮೀಸಲಿಡಲಾಗಿತ್ತು. ಇದೀಗ ಆ ಪ್ರಸ್ತಾವನೆಯನ್ನು ಬದಲಾಯಿಸಿರುವುದೇಕೆ ಎಂದು ಪ್ರಶ್ನಿಸಿದರು.
 
ಆಡಳಿತ ಪಕ್ಷದ ಸದಸ್ಯರಾದ ಅಕ್ಷಯ್, ವಿವೇಕಾನಂದ ಶೆಣೈ, ವಿನ್ನಿಬೋಲ್ಡ್ ಮೆಂಡೋನ್ಸಾ, ಸುನಿಲ್ ಕೋಟ್ಯಾನ್, ಪ್ರತಿಮಾ, ವಂದನ ಜತ್ತನ್ನ ಮುಂತಾದವರು ಶಾಸಕರ ಕಾರ್ಯವೈಖರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
 
ಪ್ರತಿಪಕ್ಷ ನಾಯಕ ಪ್ರಕಾಶ್ ರಾವ್ ಮಾತನಾಡಿ, ಶಾಸಕರು ಈ ಪ್ರಸ್ತಾವನೆಯನ್ನು ಬದಲಾಯಿಸಿದ್ದಾರೆ ಎನ್ನುವ ಆಡಳಿತ ಪಕ್ಷದ ಆರೋಪದ ಬಗ್ಗೆ ನಮಗೇನು ತಿಳಿದಿಲ್ಲ. ಅದು ನಮ್ಮ ಗಮನಕ್ಕೆ ಬಂದ ವಿಚಾರವಲ್ಲ. ಅವರು ಪ್ರಸ್ತಾವನೆಯನ್ನು ಬದಲಾಯಿಸಿದ್ದರೂ, ಆ ಅನುದಾನವನ್ನು ಪುರಸಭೆ ವ್ಯಾಪ್ತಿಗೆ ಉಪಯೋಗಿಸಿದ್ದಾರೆ ಹೊರತು ಗ್ರಾಮೀಣ ಪ್ರದೇಶಕ್ಕೆ ಕೊಂಡೊಯ್ದಿಲ್ಲ ಎಂದರು.

ಶಾಸಕರು ಈ ಕ್ಷೇತ್ರಕ್ಕಾಗಿ ಸರಕಾರದಿಂದ ಹೆಚ್ಚುವರಿ ಅನುದಾನವನ್ನು ತಂದಿದ್ದಾರೆ ಎಂದು ಗಿರಿಧರ ನಾಯಕ್ ತಿಳಿಸಿದರು. ಇದೀಗ ಶಾಸಕರು ಈ ಪ್ರಸ್ತಾವನೆಯನ್ನು ತಕ್ಷಣ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡುವಂತೆ ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು. ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿ, ಈ ಬಗ್ಗೆ ನಡೆದ ಚರ್ಚೆಯನ್ನು ಶಾಸಕರ ಗಮನಕ್ಕೆ ತರುತ್ತೇನೆ ಎಂದಾಗ, ನಿರಂತರ ಒಂದು ಗಂಟೆಗಳ ಕಾಲ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ನಡೆದ ಚರ್ಚೆ ಕೊನೆಗೊಂಡಿತು.

ಮಹಾಮಸ್ತಕಾಭಿಷೇಕದ ಸಂದರ್ಭ ದಾರಿದೀಪಕ್ಕಾಗಿ 8 ಲಕ್ಷ ರೂ. ವೆಚ್ಚದಲ್ಲಿ ದಾರಿದೀಪ ಅಳವಡಿಸಿದ್ದ, ಅವುಗಳ ಪೈಕಿ ಆನೆಕೆರೆ, ದಾನಶಾಲೆ ಮುಂತಾದ ಕಡೆಗಳಲ್ಲಿ ಶೇ.40ರಷ್ಟು ದಾರಿದೀಪ ಉರಿಯುತ್ತಿಲ್ಲ ಎಂದು ಪ್ರಕಾಶ್‍ರಾವ್ ಆರೋಪಿಸಿದರು. ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿ, ತಕ್ಷಣ ಸರಿಪಡಿಸುವ ಭರವಸೆ ನೀಡಿದರು. ಅಲ್ಲದೆ ಉತ್ತಮ ಗುಣಮಟ್ಟದ ವಿದ್ಯುತ್ ಬಲ್ಬ್‍ಗಳನ್ನು ಅಳವಡಿಸುವಂತೆ ಮುಂದಿನ ದಿನಗಳಲ್ಲಿ ಸದಸ್ಯರು ಸರ್ವಾನುಮತದ ನಿರ್ಣಯ ಕೈಗೊಳ್ಳಿ ಎಂದು ವಿನಂತಿಸಿಕೊಂಡರು.

ಸನ್ಮಿತ್ರ ಜೈನ್ ಅಸೋಸಿಯೇಷನ್ ಇದೀಗ ಮನವಿ ಮಾಡಿ ಆನೆಕೆರೆ ಪಾರ್ಕನ್ನು ವಿದ್ಯುಕ್ತವಾಗಿ ತಮಗೆ ನೀಡಿದ್ದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸುವುದಾಗಿ ತಿಳಿಸಿದ್ದಾರೆ. ಅದನ್ನು ಅವರಿಗೆ ನೀಡಿ, ನಿರ್ವಹಣೆ ವೆಚ್ಚ ಪುರಸಭೆಗೆ ಲಾಭವಾಗುತ್ತದೆ ಎಂದು ಸದಸ್ಯ ಪಾಶ್ರ್ವನಾಥ ವರ್ಮ ಒತ್ತಾಯಿಸಿದರು. ಸದಸ್ಯರ ಸರ್ವಾನುಮತದ ನಿರ್ಣಯವಿದ್ದರೆ ನೀಡಿ ಎಂದು ಮುಖ್ಯಾಧಿಕಾರಿ ತಿಳಿಸಿದರು. ಅಲ್ಲದೆ ಸಿಬ್ಬಂದಿಗಳ ಕೊರತೆಯಿರುವುದನ್ನು ಗಮನಕ್ಕೆ ತಂದರು. ಸದಸ್ಯ ಶುಭದ ರಾವ್ ಮಾತನಾಡಿ, ಅದನ್ನು ಪುರಸಭೆ ವತಿಯಿಂದಲೇ ನಿರ್ವಹಣೆ ಮಾಡುವ ಎಂದು ಸಲಹೆ ನೀಡಿದರು.

ಪುರಸಭೆ ವ್ಯಾಪ್ತಿಯಲ್ಲಿರುವ ವೈನ್‍ಶೋಪ್‍ಗಳ ಬದಿಯಲ್ಲಿ ಮಾಂಸಹಾರಿ ಹೊಟೇಲ್‍ಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅದಕ್ಕೆ ಪುರಸಭೆ ಪರವಾನಿ ಇರುವುದಿಲ್ಲ. ಹೀಗೀಗಿದ್ದರೂ ಬಾರ್ ಎಂಬ ನಾಮಫಲಕವನ್ನು ಅವಳವಡಿಸುತ್ತಿರುವುದು ಕಂಡುಬರುತ್ತಿದೆ ಎಂದು ಮೊಹಮ್ಮದ್ ಶರೀಫ್ ಪ್ರಸ್ತಾಪಿಸಿದ್ದು, ಕೂಡಲೇ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಅದನ್ನು ನಿಲ್ಲಿಸುವುದಾಗಿ ಮುಖ್ಯಾಧಿಕಾರಿಗಳು ಸಭೆಗೆ ತಿಳಿಸಿದರು.

ಕರಿಯಕಲ್ಲುನಲ್ಲಿ ಸ್ವಾಗತ ಕಮಾನ್ ಅಳವಡಿಸುವ ಬಗ್ಗೆ ಪುರಸಭೆಯಲ್ಲಿ ನಿರ್ಣಯಕೈಗೊಂಡು ಕಾಮಗಾರಿ ಆರಂಭಿಸಲಾಗಿದ್ದು, ಅಡಿಪಾಯವನ್ನು ಕಾಣದ ಕೈಗಳು ನಾಶಪಡಿಸಿರುವುದರಿಂದ ಕಾಮಗಾರಿ ಮುಂದುವರಿಸಲು ಸಾಧ್ಯವಾಗಿಲ್ಲ. ಇಂತಹ ಘಟನೆ ಮೂರನೇ ಬಾರಿ ಮರುಕಳಿಸಿದ್ದು, ಪೊಲೀಸರ ಬೆಂಬಾಗವಲಿನಲ್ಲಿ ಕಾಮಗಾರಿ ಮುಂದುವರಿಸಬೇಕು. ದುಷ್ಕರ್ಮಿಗಳ ವಿರುದ್ಧ ದೂರು ಸಲ್ಲಿಸುವಂತೆ ಸ್ಥಳಿಯ ಕೌನ್ಸಿಲರು ವಿನ್ನಬೋಲ್ಡ್ ಮೆಂಡೋನ್ಸಾ ಸಭೆಗೆ ತಿಳಿಸಿದರು.

ಪುರಸಭೆ ಅಧ್ಯಕ್ಷೆ ರೆಹಮತ್.ಎನ್.ಶೇಖ್ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಶಶಿಕಲಾ ರಾಣೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾ ರಾಜೇಂದ್ರ, ಮುಖ್ಯಾಧಿಕಾರಿ ರಾಯಪ್ಪ ಉಪಸ್ಥಿತರಿದ್ದರು.
More in this category: « ಪ್ರಕೃತಿ ವಿದ್ಯಾ ಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ. ಕಾರ್ಕಳ: ಇಟ್ ಎಂಡ್ ರನ್ ಆರೋಪಿ ವಿರುದ್ಧ ಕೇಸುದಾಖಲು »
back to top