Menu

ದೇಲಂಪಾಡಿ: ಪಾಟು ಮಹೋತ್ಸವ, ವಾರ್ಷಿಕೋತ್ಸವ

  • Published in ಕೇರಳ
  • Read 18 times
  • Comments::DISQUS_COMMENTS
ಬದಿಯಡ್ಕ: ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಸಂಘ ಮುಳ್ಳೇರಿಯ ಇದರ 20ನೇ ವಾರ್ಷಿಕೋತ್ಸವವು ದೇಲಂಪಾಡಿ ಉಮಾಮಹೇಶ್ವರ ಗಣಪತಿ ಕ್ಷೇತ್ರದ ಪಾಟು ಮಹೋತ್ಸವದ ಶುಭ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯಿತು.
  
ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸಂಘದ ಸ್ಥಾಪಕ ನಾಟ್ಯಗುರುಗಳಾದ ದೇಲಂಪಾಡಿ ಬಾಲಕೃಷ್ಣ ಗೌಡ ಅವರನ್ನು ಸಮ್ಮಾನಿಸಲಾಯಿತು. ದೇಲಂಪಾಡಿ ಕ್ಷೇತ್ರದ ಆಡಳಿತ ಸಮಿತಿಯ ಸುರೇಶ್ ಅರಳಿತ್ತಾಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮಾಯಿಪ್ಪಾಡಿ ಡಯಟಿನ ಉಪನ್ಯಾಸಕರಾದ ನಾರಾಯಣ ದೇಲಂಪಾಡಿಯವರು ಕಲಾವಿದನ ವ್ಯಕ್ತಿತ್ವವನ್ನು ಅನಾವರಣಗೈದು ಮಾತನಾಡುತ್ತಾ, ಗೌಡರು ಯಕ್ಷಗಾನದ ಪರಿಪೂರ್ಣ ಕಲಾವಿದರು. ಯಕ್ಷಗಾನ ತಂಡದಲ್ಲಿ ಗೌಡರಿದ್ದಾರೆ ಎಂಬುದೇ ಸಹಕಲಾವಿದರಿಗೆ ಆತ್ಮವಿಶ್ವಾಸದ ಟಾನಿಕ್ ಲಭಿಸಿದಂತೆ. ಯಕ್ಷಗಾನರಂಗದಲ್ಲಿ ಕಾಣಿಸಿಕೊಳ್ಳದ ವೇಷಗಳೇ ವಿರಳವೇ. ಅಪರೂಪದ ಈ ಮೇರು ಕಲಾವಿದರ ಮಾರ್ಗದರ್ಶನದಲ್ಲಿ ಬೆಳೆದ ಈ ಸಂಘವು ಇಂದು ಅವರನ್ನು ಸಮ್ಮಾನಿಸುತ್ತಿರುವುದು ಬಹಳ ಸಂತಸ ತಂದಿದೆ ಎಂದು ನುಡಿದರು. ಯಕ್ಷಗಾನ ಕಲಾವಿದ ಜಯರಾಮ ಪಡುಮಲೆ ಗೌಡರೊಂದಿಗಿನ ಒಡನಾಟವನ್ನು ಮೆಲುಕು ಹಾಕಿ ಶುಭ ಹಾರೈಸಿದರು.
 
ಇದೇ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ರಸಾಯಣ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಸಂಘದ ಮಾರ್ಗದರ್ಶಕರೂ ಹಿರಿಯರೂ ಆದ ಬೆಳ್ಳಿಗೆ ನಾರಾಯಣ ಮಣಿಯಾಣಿಯವರ ಸುಪುತ್ರಿ ಡಾ| ಆರಾಧನಾ ದೀಲೀಪ್ ಬೆಳ್ಳಿಗೆ ಮುಳ್ಳೇರಿಯ ಹಾಗೂ ಕೇರಳ ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಬೆಳ್ಳಿಗೆಯವರ ಸುಪುತ್ರ ಡಾ| ಅಶ್ವಿನಿಕುಮಾರ್ ಎನ್. ಬೆಳ್ಳಿಗೆ ಮುಳ್ಳೇರಿಯ ಇವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು. ರಾಜ ಕಾರ್ಲೆ ಮಾನಪತ್ರ ವಾಚಿಸಿದರು. ಸಂಘದ ಅಧ್ಯಕ್ಷ ಜಯಕುಮಾರ್ ಆದೂರು ಸ್ವಾಗತಿಸಿ ಕಾರ್ಯದರ್ಶಿ ಜಯಂತ ಕಾರ್ಲೆ ವಂದಿಸಿದರು.

ಬಳಿಕ ವಸಂತ ಪೆರ್ಲ ಅವರಿಂದ ತರಬೇರಿ ಪಡೆದ ಸಂಘದ ದ್ವಿತೀಯ ನಾಟ್ಯ ತಂಡದ ಕಲಾವಿದರ ರಂಗಪ್ರವೇಶದೊಂದಿಗೆ ಮಕ್ಕಳ ಯಕ್ಷಗಾನ ಶಿವಭಕ್ತ ವೀರಮಣಿ ಕಾಳಗ ಹಾಗೂ ಹಿರಿಯರ ತಂಡದಿಂದ ಮಾರಣಾಧ್ವರ ಯಕ್ಷಗಾನ ಪ್ರದರ್ಶನ ನಡೆಯಿತು.

ಯತೀಶ್ ಕುಮಾರ್ ರೈ ಮುಳ್ಳೇರಿಯ ಕಾರ್ಯಕ್ರಮ ನಿರೂಪಿಸಿದರು.
More in this category: « ನೀರ್ಚಾಲು: ಕನ್ನಡ ಲೇಖಕರು, ಪ್ರಕಾಶಕರ ಸಮಾವೇಶ `ಸಂಘಟಿತ ಪ್ರಯತ್ನದಿಂದ ಪುಸ್ತಕೋದ್ಯಮ ಅಭಿವೃದ್ಧಿ' »
back to top