Menu

`ಸಂಘಟಿತ ಪ್ರಯತ್ನದಿಂದ ಪುಸ್ತಕೋದ್ಯಮ ಅಭಿವೃದ್ಧಿ'

  • Published in ಕೇರಳ
  • Read 21 times
  • Comments::DISQUS_COMMENTS
ಬದಿಯಡ್ಕ: ಕನ್ನಡದ ಲೇಖರು, ಪ್ರಕಾಶಕರು, ಸಂಘಸಂಸ್ಥೆಗಳು, ಸಾಹಿತ್ಯ ಪರಿಷತ್ತು, ಅಕಾಡೆಮಿಗಳು, ವಿಶ್ವ ವಿದ್ಯಾಲಯಗಳ ಪ್ರಸಾರಾಂಗಗಳು, ಗ್ರಂಥಾಲಯ ಇಲಾಖೆ ಮತ್ತು ಸಂಸ್ಕೃತಿ ಇಲಾಖೆ ಒಟ್ಟಾಗಿ ಸಂಘಟನೆಯೊಂದನ್ನು ಮಾಡಿಕೊಂಡು ಸಂಯೋಜಿತ ಪ್ರಯತ್ನ ಹಾಕಿದರೆ ಪುಸ್ತಕೋದ್ಯಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಈ ಸಂಘಟನೆಯ ಮಳಿಗೆಗಳನ್ನು ಪ್ರತಿಯೊಂದು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ತೆರೆಯುವುದರಿಂದ ಎಲ್ಲ ಪುಸ್ತಕಗಳು ಓದುಗನನ್ನು ತಲಪಬಲ್ಲವು ಎಂದು ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಮತ್ತು ಕವಿ, ಸಾಹಿತಿ ಡಾ| ವಸಂತ ಕುಮಾರ ಪೆರ್ಲ ಅಭಿಪ್ರಾಯಪಟ್ಟಿದ್ದಾರೆ.
 
ಕಾಸರಗೋಡು ತಾಲೂಕು ಕನ್ನಡ ಲೇಖಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಮತ್ತು ಕಾಸರಗೋಡು ಪ್ರಕಾಶನ ವತಿಯಿಂದ ನೀರ್ಚಾಲಿನಲ್ಲಿ ಜರಗಿದ ಲೇಖಕರ ಸಮಾವೇಶದ ಸಮಾರೋಪ ಭಾಷಣ ಮಾಡುತ್ತಿದ್ದರು.

ಪ್ರಸ್ತುತ ಬೆಂಗಳೂರು ಹಾಗೂ ಮೈಸೂರಿನಲ್ಲಿರುವ ಖಾಸಗಿ ಪ್ರಕಾಶಕರ ಯಾದಿ ತಯಾರಿಸಿ ಅವರಿಗೆ ಪ್ರಕಟವಾಗಲಿರುವ ಪುಸ್ತಕಗಳ ಪಟ್ಟಿ ಕೊಟ್ಟಲ್ಲಿ ಸದ್ಯದ ಸಮಸ್ಯೆಯಿಂದ ಪಾರಾಗಬಹುದು. ಅಂತಹ ಖಾಸಗಿ ಪ್ರಕಾಶಕರು ಪ್ರಕಟವಾಗಲಿರುವ ಪುಸ್ತಕಗಳ ಅನ್ವೇಷಣೆಯಲ್ಲಿರುತ್ತಾರೆ ಎಂದೂ ಅವರು ಹೇಳಿದರು.
 
ಸಭೆಯ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ. ಭಟ್ ವಹಿಸಿದ್ದರು. ಕಾಸರಗೋಡಿನ ಕನ್ನಡಿಗರು ಸಂಘಟಿತರಾಗಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿನ ವ್ಯವಸ್ಥಾಪಕ ಜಯದೇವ ಪ್ರಸಾದ್ ಖಂಡಿಗೆ ಅವರು ಕಾಸರಗೋಡು ಗಂಡು ಮೆಟ್ಟಿನ ಕನ್ನಡ ಪ್ರದೇಶ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡಿಗರು ಭಾಷೆ ಮತ್ತು ಸಂಸ್ಕೃತಿಯ ಕಡೆಗೆ ನಿರಾಸಕ್ತರಾಗಿದ್ದಾರೆ ಎಂದರು. ಲೇಖಕರ ಸಂಘದ ಅಧ್ಯಕ್ಷ ಡಾ| ರಮಾನಂದ ಬನಾರಿ ಅವರು ಕನ್ನಡದ ಪುಸ್ತಕಗಳು ಹೆಚ್ಚು ಹೆಚ್ಚು ಪ್ರಕಟಗೊಳ್ಳಬೇಕಾದ ಅನಿವಾರ್ಯತೆಯನ್ನು ಪ್ರತಿಪಾದಿಸಿದರು.

ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯದರ್ಶಿ ವಿಜಯಲಕ್ಷ್ಮಿ ಶ್ಯಾನುಭೋಗ್ ಕಾರ್ಯಕ್ರಮ ನಿರ್ವಹಿಸಿದರು. ಡಾ| ಯು. ಮಹೇಶ್ವರಿ ಸ್ವಾಗತಿಸಿ ವಂದಿಸಿದರು. ಕಾಸರಗೋಡಿನ ಬಹುಮಂದಿ ಲೇಖಕ ಸಾಹಿತಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
More in this category: « ದೇಲಂಪಾಡಿ: ಪಾಟು ಮಹೋತ್ಸವ, ವಾರ್ಷಿಕೋತ್ಸವ ಭ್ರಷ್ಟಾಚಾರವನ್ನು ಖಂಡಿಸಿ ಬದಿಯಡ್ಕದಲ್ಲಿ ಧರಣಿ »
back to top