Menu

ಕುಂದಾಪುರ ಲಾಡ್ಜ್‌ನಲ್ಲಿ ವೃದ್ಧೆ ಕೊಲೆ

  • Published in ಉಡುಪಿ
  • Read 43 times
  • Comments::DISQUS_COMMENTS
ಕುಂದಾಪುರ : ಎಪ್ರಿಲ್ ಹದಿನೈದರಂದು ಬುಧವಾರ ರಾತ್ರಿ ನಗರದ ವಸತಿ ಗೃಹವೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ವೃದ್ಧೆಯ ಕೊಲೆ ಪ್ರಕರಣದಲ್ಲಿ ಸಂಶಯಿತ ಆರೋಪಿ ಅಜರ್ ಫಜಲ್ ಖಾನ್ ಹಾಗೂ ಆತನೊಂದಿಗೆ ನಾಪತ್ತೆಯಾಗಿದ್ದ ವೈಷ್ಣವೀ ದೇವಾಡಿಗರನ್ನು ಕುಂದಾಪುರ ಪೊಲೀಸರು ಮುಂಬೈ ಹಾಗೂ ಗುಜರಾತ್ ಪೊಲೀಸರ ಸಹಕಾರದಲ್ಲಿ ಗುಜರಾತ್‌ನ ಅಹಮ್ಮದಾಬಾದ್‌ನಿಂದ ಮುಂಬೈಗೆ ಬಂದಿಳಿಯುವ ವೇಳೆ ಬಂಧಿಸಿದ್ದು, ಪ್ರಕರಣವನ್ನು ಬೇಧಿಸಿದ್ದು, ಈ ಬಗ್ಗೆ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಸುದ್ಧಿಗೋಷ್ಟಿಯಲ್ಲಿ ಘಟನೆಯ ಕುರಿತು ವಿವರ ನೀಡಿದ್ದಾರೆ.
 
 
ಕೊಲೆ ಆರೋಪಿ ಅಝರ್, ವೃದ್ಧೆಯನ್ನು ಕೊಲೆ ಮಾಡಲು ವ್ಯವಸ್ಥಿತಿ ಸಂಚು ರೂಪಿಸಿ ಮುಂಬೈಯಿಂದ ಬರುವಾಗಲೇ ವಯರ್ ಖರೀದಿಸಿ ತಂದಿದ್ದು, ಇದೊಂದು ವ್ಯವಸ್ಥಿತಿ ಕೊಲೆ ಎಂಬುದಾಗಿ ಪೊಲೀಸರು ದೃಢಪಡಿಸಿದ್ದಾರೆ.

ಘಟನೆಯ ವಿವರ: ಇಪ್ಪತ್ತು ವರ್ಷಗಳ ಹಿಂದೆ ಆರೋಪಿ ಅಝರ್ ಫಜಲ್ ಖಾನ್ ಹಾಗೂ ಲಲಿತಾ ದೇವಾಡಿಗರ ಮಗಳು ವೈಷ್ಣವಿ ಇಬ್ಬರೂ ಮುಂಬೈಯ ಎಂಬ್ರಾಯಿಡರಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆಗಲೇ ಆತನಿಗೆ ವೈಷ್ಣವಿ ಜೊತೆಗೆ ಪ್ರೇಮಾಂಕುರವಾಗಿತ್ತು. ಆದರೆ ವೈಷ್ಣವಿಗೆ ಈ ಬಗ್ಗೆ ಏನೂ ತಿಳಿದಿರಲಿಲ್ಲ. ಹೀಗೇ ಸುಮಾರು ಹದಿನೈದು ವರ್ಷಗಳ ನಂತರ ಆತ ಬೇರೊಂದು ಕಂಪೆನಿಗೆ ಕೆಲಸಕ್ಕೆ ಸೇರುತ್ತಾನೆ. ಈ ಸಂದರ್ಭ ಇಬ್ಬರೂ ದೂರವಾಗುತ್ತಾರೆ. ಕಳೆ ಒಂದೂವರೆ ವರ್ಷಗಳ ನಂತರ ಮತ್ತೆ ಇಬ್ಬರಿಗೂ ಪರಿಚಯವಾಗುತ್ತದೆ. ಈ ಸಂದರ್ಭ ವೈಷ್ಣವಿಗೆ ಮರಾಠಿ ಮೂಲದ ವಿಜಯ ಎಂಬುವನ ಜೊತೆಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಾಗಿರುತ್ತದೆ. ಆಧರೂ ಆತ ಆಕೆಯನ್ನು ಓಲೈಸಿ ಮದುವೆಗೆ ಪ್ರಯತ್ನಿಸುತ್ತಾನೆ. ಆದರೆ ವೈಷ್ಣವಿ ಈ ಬಗ್ಗೆ ಅಮ್ಮ ಒಪ್ಪಿದರೆ ಗಂಡನನ್ನು ಬಿಟ್ಟು ಬರುವುದಾಗಿ ಸೂಚಿಸುತ್ತಾಳೆ. ಇದೇ ಕಾರಣಕ್ಕಾಗಿ ಹಲವು ಬಾರಿ ಅಝರ್ ಗಂಗೊಳ್ಳಿಗೆ ಬಂದು ಹೋಗುವುದು ಮಾಡುತ್ತಾನೆ. ನಂತರ ಒಂದು ದಿನ ದೂರವಾಣಿಯಲ್ಲಿ ಮಗಳ ವಿವಾಹದ ಬಗ್ಗೆ ಮಾತುಕತೆ ನಡೆಸುತ್ತಾನೆ. ಆದರೆ ವೈಷ್ಣವಿ ತಾಯಿ ಲಲಿತಾ ದೇವಾಡಿಗ ಇದಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ. ನಂತರ ಏಪ್ರಿಲ್ ೫ರಂದು ವೈಷ್ಣವಿಯೊಂದಿಗೆ ಮಾತುಕತೆ ನಡೆಸಿ ತಾಯಿಯನ್ನು ಒಪ್ಪಿಸಿ ಬರುವುದಾಗಿ ಹೇಳಿ ಕುಂದಾಪುರಕ್ಕೆ ಬರುತ್ತಾನೆ.
 
ಇದೇ ಸಂದರ್ಭ ಗಂಗೊಳ್ಳಿಯ ಶ್ರೀ ಜಟ್ಟಿಗೇಶ್ವರ ದೇವಸ್ಥಾನಕ್ಕೆ ಒಂದೂವರೆ ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ತಿಳಿಸಿರುತ್ತಾನೆ. ಏಪ್ರಿಲ್ ಏಳರಂದು ಕುಂದಾಪುರದ ಹೃದಯ ಭಾಗದಲ್ಲಿರುವ ವಸತಿಗೃಹವೊಂದರಲ್ಲಿ ಕೋಣೆಯನ್ನು ಬಾಡಿಗೆ ಪಡೆದು ಏಪ್ರಿಲ್ ೧೫ರಂದು ಲಲಿತಾ ದೇವಾಡಿಗರನ್ನು ವಸತಿ ಗೃಹಕ್ಕೆ ದೇವಸ್ಥಾನಕ್ಕೆ ದೇಣಿಗೆ ನೀಡುವ ಹಣವನ್ನು ಕೊಡುವುದಾಗಿ ಹೇಳಿ ಕರೆತರುತ್ತಾನೆ. ಅಲ್ಲಿ ಮಧ್ಯಾಹ್ನ ಊಟ ಮುಗಿಸಿ ಮತ್ತೆ ಮದುವೆಯ ವಿಚಾರ ಪ್ರಸ್ತಾಪ ಮಾಡುತ್ತಾನೆ. ಆದರೆ ಆ ಸಂದರ್ಭ ಆಕೆ ವಿರೋಧ ವ್ಯಕ್ತಪಡಿಸಿದ್ದ ಕಾರಣ ಮಾತಿಗೆ ಮಾತು ಬೆಳೆದು ಆರೋಪಿ ತಾನು ತಂದಿದ್ದ ವಯರ್‌ನ್ನು ಆಕೆಯ ಕುತ್ತಿಗೆಗೆ ಸುತ್ತಿ ಕೊಲೆ ಮಾಡುತ್ತಾನೆ. ಅಷ್ಟು ಹೊತ್ತಿಗಾಗಲೇ ರೂಂ ಬಾಯ್ ಬಂದಾಗ ಗಾಬರಿಗೊಂಡ ಆರೋಪಿ ಆಕೆಯ ಕುತ್ತಿಗೆಗೆ ಗಾಯ ತೋರದಂತೆ ಟವೆಲ್ಲೊಂದನ್ನು ಕಟ್ಟುತ್ತಾನೆ ಮತ್ತು ತಾನು ತಂದಿದ್ದ ವಯರನ್ನು ಕಿಟಕಿಯ ಮೂಲಕ ಎಸೆಯುತ್ತಾನೆ. ಮತ್ತು ಆಕೆ ಧರಿಸಿದ್ದ ಸಿನ್ನದ ಸರ ಹಾಗೂ ಬಳೆಯನ್ನು ಅಪಹರಿಸಿ ಮುಂಬೈಗೆ ಪರಾರಿಯಾಗುತ್ತಾನೆ. ಈ ನಡುವೆ ಸಮೀಪದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಸಹಾಯ ಪಡೆದು ಕನ್ನಡದಲ್ಲಿ ಕೊಲೆಗೀಡಾದ ಲಲಿತಾ ದೇವಾಡಿಗರ ಹೆಸರಿನಲ್ಲಿ ಆತ್ಮಹತ್ಯೆ ಪತ್ರವೊಂದನ್ನು ಸಿದ್ಧಪಡಿಸಿ ಮುಂಬೈಗೆ ಕೊಂಡೊಯ್ಯುತ್ತಾನೆ. ಅಲ್ಲಿ ಚಿನ್ನದ ಸರ ಹಾಗೂ ಬಳೆಗಳನ್ನು ಮಾರಾಟ ಮಾಡಿ ನಲ್ವತ್ತೊ ಸಾವಿರ ರೂಪಾಯಿ ಪಡೆದು ಆತ್ಮಹತ್ಯೆ ಪತ್ರವನ್ನು ವೈಷ್ಣವಿಗೆ ತೋರಿಸಿ ಆಕೆಯೊಂದಿಗೆ ಇಬ್ಬರು ಮಕ್ಕಳ ಸಹಿತ ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿರು ಸನ್ಮಾನ ಎನ್ನುವ ಲಾಡ್ಜ್‌ನಲ್ಲಿ ಉಳಿದುಕೊಳ್ಳುತ್ತಾರೆ.

ಆರೋಪಿಗಳನ್ನು ಪ್ರತಕರ್ತರ ಮುಂದೆ ಹಾಜರುಪಡಿಸಿದ ಎಸ್ಪಿ: ಡಿವೈ‌ಎಸ್ಪಿ ಕಚೇರಿಯಲ್ಲಿ ಸುದ್ಧಿ ಗೋಷ್ಟಿಯಲ್ಲಿ ಮಾತನಾಡಿದ ಸಂದರ್ಭ ಆರೋಪಿ ಅಝರ್ ಪಝಲ್ ಖಾನ್ ಹಾಗೂ ಆತನಿಗೆ ರಕ್ಷಣೆ ನೀಡಿದ ಆರೋಪದಲ್ಲಿ ವೈಷ್ಣವಿ ಯಾನೇ ಶೋಭಾಳನ್ನು ಪತ್ರಕರ್ತರ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿ ಅಝರ್ ವಿರುದ್ಧ ಕೊಲೆ ಹಾಗೂ ಸುಲಿಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವೈಷ್ಣವಿ ವಿರುದ್ಧ ಆರೋಪಿಗೆ ಬೆಂಬಲ ನೀಡಿರುವುದರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪೊಲೀಸರಿಗೆ ಬಹುಮಾನ : ಕಳೆದ ಹದಿನೈದು ದಿನಗಳಿಂದ ಆರೋಪಿಯ ಬಂಧನಕ್ಕೆ ಬಲೆ ಬೀಸಿ ಆರೋಪಿ ಬಂಧಿಸುವಲ್ಲಿ ಕೆಲಸ ಮಾಡಿದ ಪೊಲೀಸ್ ತಂಡಕ್ಕೆ ತಲಾ ಐದು ಸಾವಿರ ರೂಪಾಯಿಗಳ ಬಹುಮಾನ ನೀಡುವ ಬಗ್ಗೆ ಮೇಲಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದವರು ಹೇಳಿದರು.
More in this category: « ಬಡವರ ಗೂಡಂಗಡಿಗಳನ್ನು ತೆರವುಗೊಳಿಸುವ ಪುರಸಭೆ ವಿರುದ್ಧ ಬಿಜೆಪಿ ಆಕ್ರೋಷ ಹಟ್ಟಿಕುದ್ರುವಿನಲ್ಲಿ ಅಕ್ರಮ ಮರಳುಗಾರಿಕೆ : ಅಪಾಯದ ಭೀತಿಯಲ್ಲಿ ಜನತೆ »
back to top