Menu

ವಾರಾಹಿ ನೀರು ತಂದಿತು ಜೀವಕ್ಕೆ ಕುತ್ತು:ಕೆಸರು ಮಿಶ್ರಿತ ಮದಗದ ನೀರಲ್ಲಿ ಮುಳುಗಿ ವ್ಯಕ್ತಿ ಸಾವು

  • Published in ಉಡುಪಿ
  • Read 54 times
  • Comments::DISQUS_COMMENTS
ಕುಂದಾಪುರ: ಗುರುವಾರ ಬಿಟ್ಟಿದ್ದ ವಾರಾಹಿ ನೀರು ತುಂಬಿದ ಮದಗಕ್ಕೆ ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವ ಮದಗದಲ್ಲಿ ಮುಳುಗಿ ಮೃತಪಟ್ಟಿದ್ದು, ಆತನ ಮೃತದೇಹಕ್ಕಾಗಿ ಶೋಧಕಾರ್ಯ ತಡರಾತ್ರಿವರೆಗೂ ಸಾಗಿದ ಘಟನೆ ತಾಲೂಕಿನ ಬಿದ್ಕಲಕಟ್ಟೆ ಸಮೀಪದ ಹುಲ್ಕಲ್‌ಕೆರೆ ಎಂಬಲ್ಲಿ ಶುಕ್ರವಾರ ನಡೆದಿದೆ.
 
 
 
 
 
  
ಬಿದ್ಕಲಕಟ್ಟೆ ನಿವಾಸಿ ಗೋಪಾಲ ಕುಲಾಲ್ (೪೫) ಮದಗದಲ್ಲಿ ಮುಳುಗಿದ ವ್ಯಕ್ತಿಯಾಗಿದ್ದಾರೆ.

ಘಟನೆ ವಿವರ: ಗೋಪಾಲ ಕುಲಾಲ್ ಅವರು ಸ್ಥಳೀಯ ಬಾರೋಂದರಲ್ಲಿ ಅಡುಗೆ ವೃತ್ತಿಯನ್ನು ಮಾಡುತ್ತಿದ್ದು ಮೀನು ಶಿಕಾರಿ ಹವ್ಯಾಸವನ್ನು ಹೊಂದಿದ್ದರು. ಶುಕ್ರವಾರ ತನ್ನ ಅಡುಗೆ ಕೆಲಸಕ್ಕೆ ರಜೆ ಹಾಕಿದ್ದ ಅವರು ಮನೆ ಸಮೀಪದ ೩.೫ ಎಕ್ರೆ ಸುಮಾರು ವಿಸ್ತೀರ್ಣವಿರುವ ಹುಲ್ಕಲ್ ಕೆರೆ ಎನ್ನುವ ಸರಕಾರಿ ಮದಗಕ್ಕೆ ನಿತ್ಯದ ಹವ್ಯಾಸದಂತೆ ಮೀನು ಹಿಡಿಯಲು ಗುರುವಾರವೇ ಹಾಕಿದ್ದ ಬಲೆ ಮೇಲಕ್ಕೆತ್ತಲು ಇಳಿದಿದ್ದಾರೆ. ಆದರೇ ಗುರುವಾರ ಬೆಳಿಗ್ಗೆನಿಂದಲೇ ಯಾವುದೇ ಪೂರ್ವ ಮಾಹಿತಿಯಿಲ್ಲದೇ ಈ ಹುಲ್ಕಲ್ ಕೆರೆ ಮದಗಕ್ಕೆ ವಾರಾಹಿ ನೀರು ಬಿಟ್ಟಿದ್ದ ಕಾರಣ ಕೆಸರು ಮಿಶ್ರಿತ ನೀರು ಶೇಖರವಾಗಿತ್ತು. ನೀರಿನಲ್ಲಿ ಬಲೆಯೆತ್ತಲು ಹೋದ ಗೋಪಾಲ್ ಅವರು ಆಯತಪ್ಪಿ ನೀರಿನಲ್ಲಿ ಮುಳುಗಿದ್ದಾರೆ, ಅವರು ಮುಳುಗುತ್ತಿರುವುದನ್ನು ವ್ಯಕ್ತಿಯೋರ್ವರು ಕಣ್ಣಾರೇ ದಡದಿಂದ ನೋಡಿದರೂ ಕೂಡ ಅವರ ರಕ್ಷಣೆ ಕಷ್ಟವಾಗಿತ್ತು. ಕ್ಷಣಾರ್ಧದಲ್ಲೇ ಗೋಪಾಲ್ ಅವರು ನೀರಿನಲ್ಲಿ ಸಂಪೂರ್ಣ ಮುಳುಗಿದ್ದರು. ಪ್ರತ್ಯಕ್ಷದರ್ಶಿ ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳ, ಸ್ಥಳೀಯ ಮುಳುಗು ತಜ್ಞರು ಸ್ಥಳಕ್ಕಾಗಮಿಸಿ ಮುಳುಗಿದ್ದ ಗೋಪಾಲ ಅವರ ಮೃತದೇಹದ ಪತ್ತೆಯಾಗಿರಲಿಲ್ಲ.

ಕುಂದಾಪುರ ಅಗ್ನಿಶಾಮಕ ದಳದ ಭಾಸ್ಕರ ಖಾರ್ವಿ, ದಿನೇಶ್, ರಾಘವೇಂದ್ರ ಹಾಗೂ ಸ್ಥಳೀಯ ಮುಳುಗು ತಜ್ಞ ಮಂಜುನಾಥ ಕೊಡ್ಲಾಡಿ ಅವರು ಸತತ ಮೂರು ಗಂಟೆಗಳ ಕಾಲ ನೀರಿನಲ್ಲಿ ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಬಳಿಕ ಜೆಸಿಬಿ ಯಂತ್ರದ ಮೂಲಕ ಮದಗದ ತಡೆಗೋಡೆ ಒಡೆದು ಮದಗದ ನೀರನ್ನು ಹೊರಕ್ಕೆ ಹರಿವು ಬಿಡುವ ಪ್ರಯತ್ನವನ್ನು ಸಂಜೆ ೭ ಗಂಟೆಯಿಂದ ಮಾಡಲಾಯಿತಾದರೂ ಮದಗದಲ್ಲಿ ನೀರು ತುಂಬಿದ್ದ ಕಾರಣ ಆ ಕಾರ್ಯಾಚರಣೆಯೂ ತಡರಾತ್ರಿವರೆಗೂ ಸಾಗಿತ್ತು.

ವಾರಾಹಿ ನೀರನ್ನು ಮದಗ ಮೊದಲಾದೆಡೆ ಹರಿಸುವ ವೇಳೆ ಸ್ಥಳೀಯ ಜನರಿಗೆ ಪೂರ್ವಮಾಹಿತಿ ನೀಡಬೇಕಾಗಿತ್ತು ಆದರೇ ಇಂತಹ ಯಾವುದೇ ಕೆಲಸವಾಗದಿರುವುದೇ ಈ ದುರ್ಘಟನೆಗೆ ಕಾರಣವಾಗಿದೆ, ವಾರಾಹಿ ಅವ್ಯವಸ್ಥೆ ಜನರನ್ನು ಬಲಿತೆಗೆದುಕೊಳ್ಳುತ್ತಿರುವುದು ವಿಷಾದನೀಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಪಾಲ್ ಕುಲಾಲ್ ಅವರು ಪತ್ನಿ ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಸೇರಿದಂತೆ ಕುಟುಂಬಿಕರನ್ನು ಅಗಲಿದ್ದಾರೆ.

ಕೋಟ ಪೊಲೀಸರು ಸ್ಥಳಕ್ಕೆ ಆಗಮಿಸಿ ತಡರಾತ್ರಿವರೆಗೂ ಕಾರ್ಯಚರಣೆಯಲ್ಲಿ ತೊಡಗಿದ್ದರು.
More in this category: « ಕೋಟೇಶ್ವರ: ಗ್ಯಾಸ್ ಸ್ಟವ್ ರಿಪೇರಿ ಅಂಗಡಿ ಬೆಂಕಿ ಅಪಾರ ನಷ್ಟ ಪಾದೆಬೆಟ್ಟು ಸರಳ ಧೂಮಾವತಿ ದೈವಸ್ಥಾನದ ಪುನ: ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ »
back to top