Menu

ಬೀಜಾಡಿ ಒಂದನೇ ವಾರ್ಡಿನಲ್ಲಿ ಕೆರೆಯಂತಾದ ರಸ್ತೆ..!

  • Published in ಉಡುಪಿ
  • Read 42 times
  • Comments::DISQUS_COMMENTS
ಕುಂದಾಪುರ: ಬೀಜಾಡಿಯ ಒಂದನೇ ವಾರ್ಡಿನ ಆರ್.ಆರ್. ಪ್ಲಾಜಾ ಹಿಂಬಾಗದ ರಸ್ತೆ ದುರವಸ್ಥೆ ಇಲ್ಲಿನ ಜನರನನು ಹೈರಾಣಾಗಿಸಿದೆ. ಈ ಪ್ರದೇಶದಲ್ಲಿ ಸುಮಾರು ಐವತ್ತು ಮನೆಗಳಿದ್ದು, ಇಲ್ಲಿಯ ಸಂಪರ್ಕಕ್ಕೆ ಇರುವ ಒಂದೇ ಒಂದು ರಸ್ತೆ ಗ್ರಾಮ ಪಂಚಾಯಿತಿ ಹಾಗೂ ಮಣ್ಣು ಸಾಗಾಟದ ಲಾರಿಗಳ ನಿರ್ಲಕ್ಷ್ಯದಿಂದಾಗಿ ಸಂಪೂರ್ಣ ಹದಗೆಟ್ಟು ಹೋಗಿದ್ದು ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿ ಹರಿಯುವ ನೀರು ಮನೆಗಳಿಗೆ ನುಗ್ಗುವ ಭೀತಿ ಎದುರಾಗಿದೆ.
ಆರ್.ಆರ್.ಪ್ಲಾಜಾ ಸಮೀಪದ ಯಶೋಧ ಎಂಬುವರ ಮನೆ ಹತ್ತಿರ ಮಣ್ಣು ಸಾಗಾಟದ ಲಾರಿಗಳ ಓಡಾಟಕ್ಕೆ ಗ್ರಾಮ ಪಂಚಾಯಿತಿ ಅನುಮತಿ ನೀಡಿದ ಪರಿಣಾಮ ರಸ್ತೆಯಲ್ಲಿ ಹೊಂಡ ಬಿದ್ದಿದ್ದು, ಕೆಸರುಕೊಚ್ಚೆಯಾಗಿದೆ. ಅಲ್ಲದೇ ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ಮುಚ್ಚಿ ಹೋಗಿದ್ದು ಚರಂಡಿಯಲ್ಲಿ ಹೂಳು ತುಂಬಿದ ಪರಿಣಾಮ ಮಳೆ ನೀರೆಲ್ಲಾ ಮನೆಗೆ ನುಗ್ಗಲಾರಂಭಿಸಿದೆ.

ಈ ಬಗ್ಗೆ ವಾರದ ಹಿಂದೆ ಗ್ರಾಮ ಪಂಚಾಯಿತಿಯಿಂದ ಹಿಡಿದು ಸಚಿವರಾದಿಯಾಗಿ ಗ್ರಾಮಸ್ಥರು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಗ್ರಾಮಸ್ಥರೇ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಪರಿಣಾಮ ಲಾರಿಗಳು ಮಾರ್ಗ ಬದಲಾಯಿಸಿವೆಯಾದರೂ ಹದಗೆಟ್ಟ ರಸ್ತೆ ದುರಸ್ತಿಯತ್ತ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿಲ್ಲ. ಇದೀಗ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯ ನೀರೆಲ್ಲಾ ಪರ್ವಿನ್ ಹಾಗೂ ಯಶೋಧರವರ ಮನೆಗಳಿಗೆ ನುಗ್ಗುತ್ತಿದ್ದು, ಅಪಾಯದ ಭೀತಿ ಎದುರಾಗಿದೆ.

ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಇಡೀ ಗ್ರಾಮಸ್ಥರು ಬಹಿಷ್ಕರಿಸುವ ತೀರ್ಮಾನ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
More in this category: « ಧಾರವಾಡ: ಹಣ ವಂಚನೆ, ಶೀಲಹರಣ ಮಾಡಿದ ಕುಂದಾಪುರ ಮೂಲದ ಆರೋಪಿಗೆ ಜಾಮೀನು ಕೋಟಿ ಶ್ರೀ ವೆಂಕಟೇಶ ಮಂತ್ರ (ಲಿಖಿತ) ಜಪ ಮಹಾಯಜ್ಞ »
back to top