Menu

ಶ್ರೀ ಸಂಸ್ಥಾನ ಗೌಡಪಾದಾಚಾರ್ಯ (ಕವಳೆ) ಮಠಾಧೀಶರಿಗೆ ಗುರುವಂದನೆ

  • Published in ಉಡುಪಿ
  • Read 33 times
  • Comments::DISQUS_COMMENTS
ಗಂಗೊಳ್ಳಿ : ಭಗವಂತನ ಕೃಪೆಗೆ ಪಾತ್ರವಾಗಲು ವೃತ, ಉಪಾಸನೆ ಪೂಜೆಗಳನ್ನು ನಿರಂತರವಾಗಿ ಮಾಡುತ್ತಾ ನಿಯಮ ಧರ್ಮಗಳನ್ನು ಪಾಲಿಸಬೇಕು. ವೇದ, ಧರ್ಮ, ಶಾಸ್ತ್ರಗಳಲ್ಲಿ ಹೇಳಿದಂತೆ ಹಬ್ಬ ಹರಿದಿನಗಳನ್ನು ಕಾಲಕಾಲಕ್ಕೆ ಆಚರಣೆ ಮಾಡಿಕೊಂಡು ಬರುತ್ತಿರಬೇಕು. ಭಗವಂತನಲ್ಲಿ ಭಕ್ತಿ ನಿರ್ಮಾಣ ಮಾಡಿಕೊಳ್ಳುತ್ತಾ ಗುರುವಿನ ಅನುಗ್ರಹದೊಂದಿಗೆ ಭಗವಂತನ ನಾಮಸ್ಮರಣೆ ಅನುದಿನ ಮಾಡಬೇಕು ಎಂದು ಶ್ರೀ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ತೀರ್ಥ ಸ್ವಾಮೀಜಿ ಹೇಳಿದರು.
 
ಗಂಗೊಳ್ಳಿಯ ನಿನಾದ ಸಂಸ್ಥೆಯ ದಶಮಾನೋತ್ಸವ ಸಮಾರೋಪ ಸಮಾರಂಭ ಪ್ರಯುಕ್ತ ಸೋಮವಾರ ಪೇಟೆ ಶ್ರೀ ವಿಠಲ ರಖುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದ ಶ್ರೀ ಸುಧೀಂದ್ರ ಕೃಪಾ ಸದನದಲ್ಲಿ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ (ಕವಳೆ) ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಯವರ ದೀಕ್ಷಾ ಮಹೋತ್ಸವದ 21ನೇ ವರ್ಷಾಚರಣೆ ಪ್ರಯುಕ್ತ ಜರಗಿದ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದರು.

ನಮ್ಮ ದಿನನಿತ್ಯದ ಚಿಂತೆಗಳನ್ನು ದೂರ ಮಾಡಲು ಪ್ರಮುಖವಾಗಿ ಭಜನೆಯ ಮೂಲಕ ನಮ್ಮ ಸಮಾಜದಲ್ಲಿ, ಮುಖ್ಯವಾಗಿ ಸಮಾಜದ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಲು ನಿನಾದ ಸಂಸ್ಥೆಯು ಪ್ರಯತ್ನಿಸುತ್ತಿರುವುದು ಮತ್ತು ದಶಮಾನೋತ್ಸವದ ಪ್ರಯುಕ್ತ ನಡೆಸಿದ ವಿವಿಧ ಧಾರ್ಮಿಕ ಅನುಷ್ಠಾನಗಳು ಶ್ಲಾಘನೀಯವಾದುದು ಎಂದು ಹರಿಸಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಮಾತನಾಡಿ, ಬುದ್ಧಿವಂತ ಸಮಾಜವೆಂದು ಗುರುತಿಸಿಕೊಂಡಿರುವ ಗೌಡ ಸಾರಸ್ವತ ಸಮಾಜದವರಾದ ನಮ್ಮಲ್ಲಿ ವಿಚಾರವಂತಿಕೆ, ಸ್ವಂತಿಕೆ ಇದೆ. ನಾವು ನಮ್ಮ ಜ್ಞಾನ, ಪ್ರತಿಭೆ, ಕ್ರಿಯಾಶಕ್ತಿಯನ್ನು ಬಳಸಿಕೊಂಡು ಸಮಾಜದಲ್ಲಿ ಪ್ರೇಮಮಯ ವಾತಾವರಣ ನಿರ್ಮಿಸಬೇಕು ಎಂದರು.
 
ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಕಾಶೀನಾಥ ಪೈ ಶ್ರೀಗಳು ಗುಣಗಾನ ಮಾಡಿದರು. ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಬೈಲೂರು ಮಂಜುನಾಥ ಶೆಣೈ, ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಶ್ಯಾನುಭಾಗ್, ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಮೋಹನದಾಸ ಭಟ್, ಶ್ರೀ ಜಗದಾಂಬ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಅನಂತಕೃಷ್ಣ ಭಟ್, ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ, ವೇದಮೂರ್ತಿ ಜಿ.ರಾಘವೇಂದ್ರ ಆಚಾರ್ಯ, ನಿನಾದ ಸಂಸ್ಥೆಯ ದಶಮಾನೋತ್ಸವ ಸಮಿತಿ ಅಧ್ಯಕ್ಷ ಜಿ.ರೋಹಿದಾಸ ನಾಯಕ್, ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು ಮೊದಲಾದವರು ಉಪಸ್ಥಿತರಿದ್ದರು.
 
ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದ ಜಿ.ಸುದನೇಶ ಶ್ಯಾನುಭಾಗ್ ಸ್ವಾಗತಿಸಿ, ಸಂಸ್ಥೆಯ ಅಧ್ಯಕ್ಷ ಎಂ.ಮುಕುಂದ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿ.ಗಣೇಶ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
More in this category: « ಶ್ರೀ ಭವಾನಿ ಶಂಕರ ದೇವರಿಗೆ ಶತ ರುದ್ರಾಭಿಷೇಕ ಯಕ್ಷವೈಭವ ಕಾರ್ಯಕ್ರಮ »
back to top