Menu

ಭ್ರಷ್ಟಾಚಾರದ ಆರೋಪ ಸಾಬೀತುಪಡಿಸಿದಲ್ಲಿ ರಾಜಕೀಯದಿಂದಲೇ ನಿವೃತ್ತಿ :ಬಿ.ಎಸ್ ಯಡಿಯೂರಪ್ಪ

  • Published in ಉಡುಪಿ
  • Read 26 times
  • Comments::DISQUS_COMMENTS
ಕುಂದಾಪುರ: ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಯ ಹಿತದೃಷ್ಟಿಯಲ್ಲಿ ಕೈಗೆತ್ತಿಕೊಳ್ಳುತ್ತಿರುವ ಯೋಜನೆಗಳನ್ನು ಸಹಿಸಲಾಗದ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ವಿರುದ್ಧ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಹೇಳುವಂತಹ ಯಾವುದೇ ಭ್ರಷ್ಟಾಚಾರದ ಆರೋಪಗಳನ್ನು ಸಾಬೀತುಪಡಿಸಿದಲ್ಲಿ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಮಾಜೀ ಮುಖ್ಯ ಮಂತ್ರಿ, ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
 
ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ಬುಧವಾರ ಸಂಜೆ ಕರೆಯಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಎನ್ನುವುದು ತಾಲೂಕು, ಜಿಲ್ಲಾ ಪಂಚಾಯಿತಿ, ವಿಧಾನಸಭೆ ಹಾಗೂ ಲೋಕಸಭಾ ಪ್ರತಿನಿಧಿಗಳ ಆಯ್ಕೆಯ ಅಡಿಗಲ್ಲು. ಈ ನಿಟ್ಟಿನಲ್ಲಿ ಇತರ ಪಕ್ಷಗಳ ಸುಳ್ಳು ಆಪಾದನೆಗೆ ಕಿವಿಗೊಡದೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಪಂಚಾಯಿತಿ ಅಭಿವೃದ್ಧಿಗೆ ಸಿದ್ಧರಾಗಬೇಕಾಗಿದೆ ಎಂದು ಕರೆ ನೀಡಿದರು.

ಉಡಪಿ ಜಿಲ್ಲೆಯಲ್ಲಿ 155 ಗ್ರಾಮ ಪಂಚಾಯಿತಿಗಳ 2398 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬೈಂದೂರಿನಲ್ಲಿ 42 ಗ್ರಾಮ ಪಂಚಾಯಿತಿಗಳಿದ್ದು, ಅದರಲ್ಲಿ 39 ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯುತ್ತಿದೆ. ಕನಿಷ್ಟ 25 ಗ್ರಾಮ ಪಂಚಾಯಿತಿಗಳಲ್ಲಿ ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಆರಿಸುವ ಮೂಲಕ ಗ್ರಾಮ ಪಂಚಾಯಿತಿಗಳನ್ನು ತೆಕ್ಕೆಗೆ ತೆಗೆದುಕೊಳ್ಳಬೇಕಾಗಿದೆ ಎಂದವರು ಹೇಳಿದರು.

ಸಭೆ, ಸಮಾರಂಭಗಳನ್ನು ಇಲ್ಲಿಗೆ ನಿಲ್ಲಿಸಿ. ಮನೆ ಮನೆಗೆ ಹೋಗಿ ಕಾಂಗ್ರೆಸ್ ವೈಫಲ್ಯ ಹಾಗೂ ಕೇಂದ್ರದ ಸಾಧನೆಗಳನ್ನು ಮತದಾರರ ಮನದಲ್ಲಿ ಬಿತ್ತುವ ಕೆಲಸ ಮಾಡಿ ಎಂದು ಕರೆಕೊಟ್ಟ ಯಡಿಯೂರಪ್ಪ, ಬಿಜೆಪಿ ಬೆಂಬಲಿತ ಪ್ರಾಮಾಣಿಕ ಅಭ್ಯರ್ಥಿಗಳ ಆಯ್ಕೆಗೆ ಸಿದ್ದರಾಗಿ ಎಂದರು

ಒತ್ತಾಯದ ಭೂ ಸ್ವಾಧೀನ ಇಲ್ಲ: ಲೋಕಸಭಾ ಕಲಾಪಗಳು ಆರಂಭಗೊಂಡಂದಿನಿಂದ ಕಾಂಗ್ರೆಸ್ ಬಿಜೆಪಿಯನ್ನು ಜರಿಯುವ ಕೆಲಸದಲ್ಲಿ ತೊಡಗಿದೆ. ಇದಕ್ಕೆ ಬಹುಮುಖ್ಯ ಕಾರಣ ಕೇಮದ್ರದ ಭೂ ಸ್ವಾಧೀನ ಕಾಯ್ದೆಗೆ ತಿಡ್ಡುಪಡಿ ತುರುವ ಕೇಂದ್ರದ ಯೀಓಚನೆ ಎಂದ ಅವರು, ಯಾವುದೇ ಕಾರಣಕ್ಕೂ ರೈತರ ಜಮೀನನ್ನು ಒತ್ತಾಯ ಪೂರ್ವಕವಾಗಲೀ ಬಲಾತ್ಕಾರವಾಗಿಯಾಗಲೀ ಸ್ವಾಧೀನಪಡಿಸಕೊಳ್ಳಲಾಗುವುದಿಲ್ಲ. ಈ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕೆಲಸವಾಗಬೇಕಿದೆ ಎಂದ ಅವರು, ದೇಶದಲ್ಲಿ ರೈಲ್ವೇ, ನೀರಾವರೀ, ಅರಣ್ಯ ಸೇರಿದಂತೆ ಯಾವುದೇ ಯೋಜನೆಗಳಿಗೆ ಕೇವಲ ಸ್ವಹಿತಾಸಕ್ತಿಯ ಕೆಲವರಿಂದ ತಡೆಯುಂಟಾಗುವುದನ್ನು ತಪ್ಪಿಸಲೋಸುಗ ಈ ತಿದ್ದುಪಡಿಗೆ ಚಿಂತನೆ ನಡೆದಿದೆ ಎಂದರು.

ಕಾಂಗ್ರೆಸ್ ನೇತೃತ್ವದ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ನಡೆಸಿದ ಪಾಪವನ್ನು ತೊಳೆಯಲು ನಮಗೆ ಒಂದು ವರ್ಷ ಬೇಕಾಯಿತು. ಈಗ ಭಾರತ ಆರ್ಥಿಕವಾಗಿಯೂ ಬಹಳಷ್ಟು ಗಟ್ಟಿಯಾಗುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲಿ ಚೀನಾವನ್ನೂ ಹಿಂದಿಕ್ಕೆ ಪ್ರಪಂಚದಲ್ಲಿಯೇ ಅತೀ ಬಲಿಷ್ಟ ರಾಷ್ಟ್ರವಾಗಲಿದೆ ಎಂದು ಭವಿಷ್ಯ ನುಡಿದರು.

ಬಿಜೆಪಿಯ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್ ತನ್ನ ಅವಧಿಯಲ್ಲಿ ನಡೆಸಿದ್ದ ಕಲ್ಲಿದ್ದಲ್ಲು ಹಗರಣ, 2ಜಿ, 3ಜಿ ಸ್ಪೆಕ್ಟ್ರಂ ಹಗರಣ ಮೊದಲಾದ ಹಗರಣಗಳ ಬಗ್ಗೆಯೂ ಸ್ಪಷ್ಟನೆ ನೀಡಲಿ ಎಂದರು, ರಾಜ್ಯ ಸರ್ಕಾರ ಹೇಳುತ್ತಿರುವ ಉಚಿತ ಅಕ್ಕಿ, ಗೋಧಿ ಹಾಗೂ ಸಕ್ಕರೆ ವಿತರಣೆಯಲ್ಲಿ ಶೇ. 95 ಪಾಲು ಕೇಂದ್ರ ಸರ್ಕಾರದ್ದಿದೆ ಎಂದ ಅವರು, ರಾಜ್ಯಕ್ಕೆ ಈಗಿನ ಲೆಕ್ಕಾಚಾರದ ಪ್ರಕಾರ 2ಲಕ್ 24 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತಿದ್ದು, ಅದರಲ್ಲಿ ಕೇಂದ್ರ ಸರ್ಕಾರ 2ಲಕ್ಷದ 17 ಸಾವಿರದ 403 ಮೆಟ್ರಿಕ್ ಟನ್ ಅಕ್ಕಿಯನ್ನು 28 ರೂಪಾಯಿಗೆ ಖರೀದಿಸಿ 3ರೂಪಾಯಿಗೆ ನೀಡುತ್ತಿದೆ. ಗೋಧಿ ಕೆಜಿಗೆ 20 ರೂಪಾಯಿಯಂತೆ ಖರೀದಿಸಿ 2 ರೂ.ಗೆ ನೀಡುತ್ತಿದೆ. ಸಕ್ಕರೆಯನ್ನು 24 ರೂಪಾಯಿಗೆ ಖರೀದಿಸಿ 13 ರೂಪಾಯಿಗೆ ನೀಡುತ್ತಿದೆ, ಇದರಲ್ಲಿ ರಾಜ್ಯದ ಸಾಧನೆ ಏನು ಎಂದು ಪ್ರಶ್ನಿಸಿದರು.

ಈ ಸಂದರ್ಭ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ, ಮಾಜೀ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಜಿಲ್ಲಾ ಪಂಚಾಯಿತಿ ಸದಸ್ಯೆ ಇಂದಿರಾ ಶೆಟ್ಟಿ, ಸುರೇಶ್ ಶೆಟ್ಟಿ ಯೆಡೇರಿ, ದೀಪಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ನಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ,ಎಂ.ಸುಕುಮಾರ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿದರು.
More in this category: « ಯಕ್ಷವೈಭವ ಕಾರ್ಯಕ್ರಮ ರಾಷ್ಟ್ರ ಪಕ್ಷಿ ವಾಹನ ಅಪಘಾತಕ್ಕೆ ಬಲಿ »
back to top