Log in

ಶ್ರೀ ರಾಮ ನಾಮ ತಾರಕ ಮಂತ್ರ ಏಕಾಹ

ಗಂಗೊಳ್ಳಿ : ಗಂಗೊಳ್ಳಿಯ ನಿನಾದ ಸಂಸ್ಥೆಯ ದಶಮಾನೋತ್ಸವ ಸಮಾರೋಪ ಸಮಾರಂಭ ಪ್ರಯುಕ್ತ ಗುರುವಾರ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀ ರಾಮದೇವ ವೀರವಿಠಲ ದೇವರ ಸನ್ನಿಧಾನದಲ್ಲಿ ಶ್ರೀ ರಾಮ ನಾಮ ತಾರಕ ಮಂತ್ರ ಏಕಾಹ ಜರಗಿತು.
 
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಮತ್ತು ಶ್ರೀ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ತೀರ್ಥ ಸ್ವಾಮೀಜಿಯವರು ಶ್ರೀ ರಾಮ ನಾಮ ತಾರಕ ಮಂತ್ರ ಏಕಾಹ ಉದ್ಘಾಟಿಸಿ ಆಶೀರ್ವಚನ ನೀಡಿದರು.

ದೇವಳದ ಆಡಳಿತ ಮೊಕ್ತೇಸರ ಬೈಲೂರು ಮಂಜುನಾಥ ಶೆಣೈ, ಗಂಗೊಳ್ಳಿ ಶ್ರೀ ವಿಠಲ ರುಕುಮಾಯಿ ತಥಾ ಮುಖ್ಯ ಪ್ರಾಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಕಾಶೀನಾಥ ಪೈ, ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ, ವೇದಮೂರ್ತಿ ಜಿ.ವೇದವ್ಯಾಸ ಆಚಾರ್ಯ, ನಿನಾದ ಸಂಸ್ಥೆಯ ಅಧ್ಯಕ್ಷ ಎಂ.ಮುಕುಂದ ಪೈ, ಸತೀಶ ಎಂ.ನಾಯಕ್ ನಾಡ, ನಿನಾದ ಸಂಸ್ಥೆಯ ಪದಾಧಿಕಾರಿಗಳು, ದೇವಳದ ಆಡಳಿತ ಮಂಡಳಿ ಸದಸ್ಯರು ಹಾಗೂ ಊರಿನ ಪರ ಊರಿನ ಭಜಕರು, ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.
 
ಗುರುವಾರ ಬೆಳಿಗ್ಗೆ ಆರಂಭಗೊಂಡ ಶ್ರೀ ರಾಮ ನಾಮ ತಾರಕ ಮಂತ್ರ ಏಕಾಹವು ಶುಕ್ರವಾರ ಬೆಳಿಗ್ಗೆ ದೀಪ ವಿಸರ್ಜನೆಯೊಂದಿಗೆ ಸಮಾಪನಗೊಂಡಿತು.
  • Read: 4 times

ಮದುವೆ ಮನೆಯಲ್ಲಿ ಹೈಡ್ರಾಮ: ಎರಡನೇ ಮದುವೆ ನಿಲ್ಲಿಸಿದ ಪತ್ನಿ: ವಧುವಿಗೆ ಲೈಫ್ ಕೊಟ್ಟ ಯುವಕ

ಕುಂದಾಪುರ: ಮದುವೆಯೊಂದರ ಸಂಭ್ರಮ ಅಲ್ಲಿ ಜೋರಾಗಿತ್ತು. ಮಧ್ಯಾಹ್ನ ಮುಹೂರ್ತದ ಸಮಯಕ್ಕೆ ಆಗಮಿಸಿದ್ದಳು ನೋಡಿ ವರ ಮಹಾಶಯನ ಮೊದಲ ಪತ್ನಿ. ನಡೆಯುವ ಎರಡನೇ ಮದುವೆ ನಿಂತಿತ್ತು. ವರಮಹಾಶಯನ ಹಳೆ ಮದುವೆ ವಿಚಾರದ ಗುಟ್ಟು ರಟ್ಟಾಗಿತ್ತು, ಹೊಸ ಮದುವೆ ಮುರಿದು ಬಿದ್ದಿತ್ತು. ಇಷ್ಟೆಲ್ಲಾ ನಡೆದಿದ್ದು ಕೋಟ ಠಾಣೆ ವ್ಯಾಪ್ತಿಯ ಗುರುವಾರ ಮಣೂರಿನ ಕಲ್ಯಾಣ ಮಂದಿರವೊಂದರಲ್ಲಿ.
 
 
ಬೆಂಗಳೂರು ಕನಕಪುರದ ಆರೋಹಳ್ಳಿ ಮೂಲದ ಸರಸ್ವತಿಗೆ ಮಿಸ್ ಕಾಲ್ ಮೂಲಕ ನಾಲ್ಕು ವರ್ಷಗಳ ಹಿಂದೆ ಪರಿಚಯವಾಗಿದ್ದ ಭೂಪನೇ ಕೋಟ ಸಮೀಪದ ಕಾರ್ತಟ್ಟು ನಿವಾಸಿ ಮಣಿಪಾಲದ ಸಂಸ್ಥೆಯೊಂದರ ಉದ್ಯೋಗಿ ಶಂಕರ್. ನಾಲ್ಕು ವರ್ಷಗಳ ಹಿಂದಿನ ಮೊಬೈಲ್ ಪರಿಚಯ ಪ್ರೇಮ ಪ್ರಣಯಕ್ಕೆ ತಿರುಗಿ ಕಳೆದ ವರ್ಷ ಬೆಂಗಳೂರಿನ ಬೋಳಾರೆ ಮುನೇಶ್ವರ ದೇವಸ್ಥಾನದಲ್ಲಿ ಸರಸ್ವತಿ ಸಂಬಂಧಿಕರ ಸಮಕ್ಷದಲ್ಲಿ ಸತಿಪತಿಯಾಗಿದ್ದರು. ಮಣಿಪಾಲದಲಿ ಕೆಲಸ ಮಾಡಿಕೊಂಡಿದ್ದ ಈ ಶಂಕರ ಆಗಾಗ್ಗೇ ಬೆಂಗಳೂರಿಗೆ ಹೋಗಿ ಪತ್ನಿಯೊಂದಿಗೆ ಇದ್ದು ಬರುತ್ತಿದ್ದ. ಪತ್ನಿ ಈತನ ಫೋಷಕರ ಬಗೆ ಕೇಳಿದ್ದಗಲೆಲ್ಲಾ, ಈಗಲೇ ಮದುವೆ ವಿಚಾರ ತಿಳಿಸುವುದು ಬೇಡ ತಂದೆ ತಾಯಿಗೆ ಅನಾರೋಗ್ಯವಿದೆ ಎಂದೆಲ್ಲಾ ಕಥೆ ಹೆಣೆದಿದ್ದ. ಮನೆಯಲ್ಲೂ ಮದುವೆ ಬೇಡ ಎಂದೇ ಹೇಳಿಕೊಂಡು ಬಂದಿದ್ದ. ಆದರೇ ಮನೆಯವರು ನಾಗೂರಿನ ಯುವತಿಯೋರ್ವಳನ್ನು ಗೊತ್ತು ಮಾಡಿ ಮದುವೆ ನಿಶ್ಚಯಿಸಿ ಗುರುವಾರ ಮಣೂರಿನ ಕಲ್ಯಾಣ ಮಂದಿರದಲ್ಲಿ ಮದುವೆ ಫಿಕ್ಸ್ ಮಾಡಿದ್ರು.

ಎರಡು ತಿಂಗಳ ಹಿಂದೆ ಶಂಕರ ತಾನೂ ಚೆನ್ನೈಗೆ ತೆರಳುತ್ತಿದ್ದು ಸ್ವಲ್ಪ ದಿನಗಳ ಕಾಲ ಸಿಗಲಾಗೊಲ್ಲ ಎಂದು ಸರಸ್ವತಿಗೆ ಹೇಳಿ ಬಂದಿದ್ದ. ಆದರೇ ಎರಡು ತಿಂಗಳಾದರೂ ಕೂಡ ಸರಸ್ವತಿಯನ್ನು ನೋಡಲು ಹೋಗದಿದ್ದಾಗ ಆಕೆಗೂ ಅನುಮಾನ ಬಂದಿದೆ. ಈಕೆ ಕಳೆದ ಮೂರು ದಿನಗಳ ಹಿಂದೆ ಶಂಕರನ ಸ್ನೇಹಿತನಿಗೆ ಫೋನಾಯಿಸಿ ವಿಚಾರವೇನೆಂದು ಕೇಳಿದ್ದಾಳೆ. ಆಗಲೇ ಅಕೆಗೆ ಶಾಕ್ ಕಾದಿತ್ತು. ತಾನೂ ನಂಬಿ ಪ್ರೀತಿಸಿ ಮದುವೆಯಾಗಿದ್ದ ಶಂಕರ ಇನ್ನೊಬ್ಬಾಕೆಯನ್ನು ವರಿಸುತ್ತಾನೆಂಬ ವಿಚಾರ ತಿಳಿದಿತ್ತು. ಕೂಡಲೇ ಆರೋಹಳ್ಳಿ ಪೊಲೀಸ್ ಠಾಣೆಗೆ ಹೋದ ಈಕೆ ಅಲ್ಲಿನ ಪೊಲೀಸರೊಂದಿಗೆ ವಿಚಾರ ತಿಳಿಸಿ ಅವರೊಂದಿಗೆ ಹಾಗೂ ತನ್ನ ತಾಯಿ ಹಾಗೂ ಸೋದರತ್ತೆಯೊಂದಿಗೆ ಬುಧವಾರ ಬೆಂಗಳುರಿನಿಂದ ಕೋಟಕ್ಕೆ ಹೊರಟು ಗುರುವಾರ ಬೆಳಿಗ್ಗೆ ಬಂದಿಳಿದಿದ್ದಾಳೆ. ಮುಹೂರ್ತದ ಸಮಯಕ್ಕೆ ಮಣೂರಿನ ಕಲ್ಯಾಣ ಮಂದಿರಕೆ ಪೊಲೀಸರು ಹಾಗೂ ಪೋಷಕರೊಡಗೂಡಿ ಹೋದ ಸರಸ್ವತಿ ಮದುವೆ ಹುಡುಗಿ ಹಾಗೂ ಶಂಕರನ ಕಡೆಯವರಲ್ಲಿ ವಿಚಾರ ಹೇಳಿದ್ದಾಳೆ. ಈ ಸಮಯ ಮದುವೆ ನಿಂತು ಶಂಕರನನ್ನು ಪೊಲೀಸರು ವಶಕ್ಕೂ ಪಡೆದರು.

ನಾಗೂರಿನ ಯುವತಿ ಇಷ್ಟೆಲ್ಲಾ ರಾದ್ದಾಂತ ಕಂಡು ದಂಗಾಗಿದ್ದಳು. ಕೂಡಲೇ ಎರಡು ಕಡೆಯವರ ಸಮಯಪ್ರಜ್ನೆಯಿಂದ ನಡೆಯಬೇಕಿದ್ದ ಸುಮೂಹುರ್ತದಲ್ಲಿಯೇ ನಾಗೂರಿನ ಮದುಮಗಳ ಮದುವೆ ಶಂಕರನ ಸಂಬಂಧಿಕ ದೇವೇಂದ್ರನ ಜೊತೆ ನಡೆದಿತ್ತು. ಮದುವೆಗೆ ಬಂದವರು ವಧು-ವರನನ್ನು ಹಾರೈಸಿ ಶುಭ ಕೋರಿದರು.

ಇನ್ನೊಂದೆಡೆ ಪೊಲಿಸ್ ಠಾಣೆಯಲ್ಲಿ ಪೊಲಿಸರು, ಮಹಿಳಾ ಸಾಂತ್ವಾನ ಕೇಂದ್ರದವರು ಹಾಗೂ ಬೆಂಗಳೂರಿನ ಸರಸ್ವತಿ ಸಂಬಂಧಿಕರು ಮಾತುಕತೆ ನಡೆಸಿ ಶಂಕರ್ ಹಾಗೂ ಸರಸ್ವತಿ ಮದುವೆಯನ್ನು ಶುಕ್ರವಾರ ಶಾಸ್ತ್ರೋಕ್ತವಾಗಿ ನಡೆಸುವ ಆಲೋಚನೆಯನ್ನು ಮಾಡಿದ್ದಾರೆ. ಅಲ್ಲದೇ ಶಂಕರ್ ಕೂಡ ಸರಸ್ವತಿಗೆ ಬಾಳು ಕೊಡಲು ಒಪ್ಪಿದ್ದಾನೆ. ಇತ್ತ ಮದುವೆ ನಿಂತಿದ್ದ ವಧುವಿಗೆ ಲೈಫ್ ಕೊಡುವ ಮೂಲಕ ಶಂಕರನ ಸಂಬಂಧಿಕ ದೇವೇಂದ್ರ ಹೀರೋ ಆಗಿದ್ದಾನೆ.
  • Read: 17 times

ವಾರಿಯರ್ ಚಿತ್ರೀಕರಣದಿಂದ ಟ್ರಾಫಿಕ್ ಜಾಮ್

ಕುಂದಾಪುರ: ಸುಮಾರು ಇಪ್ಪತ್ತೈದು ಜನರ ತಂಡವೊಂದು ರಸ್ತೆಯಲ್ಲಿಯಲ್ಲಿಯೇ ಕ್ಯಾಮೆರಾ, ಕುರ್ಚಿ ಹಾಕಿ ಕುಳಿತುಕೊಳ್ಳುವ ಮೂಲಕ ಗೆರುವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಕುಂದಾಪುರದ ಮುಖ್ಯ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ಥಗೊಂಡ ಪರಿಣಾಮ ಸ್ಥಳಕ್ಕಾಗಮಿಸಿದ ಸಂಚಾರಿ ಪೊಲೀಸರು ತಂಡವನ್ನು ರಸ್ತೆಯಿಂದ ಹೊರಕ್ಕೆ ಕಳುಹಿಸಿದ ಘಟನೆ ನಡೆದಿದೆ.
      
   
ವಾರಿಯರ್ ಎನ್ನುವ ಚಲನಚಿತ್ರವೊಂದನ್ನು ಚಿತ್ರೀಕರಿಸಲು ತಂಡವೊಂದು ಕುಂದಾಪುರಕ್ಕೆ ಗುರುವಾರ ಆಗಮಿಸಿತ್ತು. ಈ ಸಂಬಂಧ ಚಿತ್ರೀಕರಣ ತಂಡದ ಮ್ಯಾನೇಜರ್ ಕುಂದಾಪುರ ಠಾಣೆಯಲ್ಲಿ ಮೌಖಿಕ ಅನುಮತಿ ಪಡೆದುಕೊಂಡಿದ್ದು, ಈ ಸಂದರ್ಭ ಯಾವುದೇ ಸಂಚಾರಕ್ಕೆ ಅಡಚಣೆ ಉಂಟುಮಾಡುವುದಿಲ್ಲ ಎನ್ನುವ ಭರವಸೆ ನೀಡಿದ್ದರು.

ಆದರೆ ಗುರುವಾರ ಮಧ್ಯಾಹ್ನದಿಂದ ಆರಂಭಗೊಂಡ ಚಿತ್ರೀಕರಣದ ಸಂದರ್ಭ ರಸ್ತೆಯಲ್ಲಿ ಬರುತ್ತಿದ್ದ ವಾಹನಗಳನ್ನು ತಡೆದು ಬದಿಗೆ ಸರಿಯಿರಿ ಎನ್ನುತ್ತಿದ್ದ ಚಿತ್ರೀಕರಣದ ತಂಡದಿಂದ ಸುಮಾರು ಮೂರು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ಥವಾಗಿತ್ತು. ಇದೇ ಸಂದರ್ಭ ದಾರಿಹೋಕರೂ ಚಿತ್ರೀಕರಣವನ್ನು ವೀಕ್ಷಿಸಲು ಜಮಾಯಿಸಿದ್ದು ಸಂಚಾರಕ್ಕೆ ತೊಂದರೆಯುಂಟಾಯಿತು.

ಈ ಸಂದರ್ಭ ಸ್ಥಳಕ್ಕಾಗಮಿಸಿದ ಸಂಚಾರಿ ಪೊಲೀಸರು ಚಿತ್ರೀಕರಣದ ಅನುಮತಿ ಪತ್ರ ಕೇಳಿದಾಗ ತಂಡ ತಬ್ಬಿಬ್ಬಾಗಿದ್ದು, ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿದೆ.
  • Read: 5 times

ಬೀದಿನಾಯಿಗಳ ದಾಳಿಗೆ ಓಡಿ ಸುಸ್ತಾಗಿ ಹೃದಯಾಘಾತದಿಂದ ಜಿಂಕೆ ಮರಿ ಬಲಿ

ಕುಂದಾಪುರ: ಜಿಂಕೆ ಮರಿಯೊಂದು ದಾರಿ ತಪ್ಪಿ ಊರಿಗೆ ಬಂದಾಗ ಬೀದಿನಾಯಿಗಳ ದಾಳಿಗೆ ಓಡಿ ಸುಸ್ತಾಗಿ ಹೃದಯಾಘಾತದಿಂದ ಜಿಂಕೆ ಮರಿಯೊಂದು ಬಲಿಯಾದ ಘಟನೆ ಗುರುವಾರ ಸಂಜೆ ಬಳ್ಕೂರು ಜಪ್ತಿ ಸಂಪರ್ಕ ರಸ್ತೆ ಸಮೀಪ ನಡೆದಿದೆ.
 
 
ಗುರುವಾರ ಸಂಜೆ ಸುಮಾರು ಎರಡು ಗಂಟೆಯ ಸುಮಾರಿಗೆ ಬಳ್ಕೂರಿನಿಂದ ಜಪ್ತಿ ಸಂಪರ್ಕ ರಸ್ತೆ ಸಮೀಪ ಸುಬ್ಬ ಆಚಾರಿ ಎಂಬುವರ ಮನೆ ಸಮೀಪದ ಗದ್ದೆಯೊಂದರಲ್ಲಿ ಸುಮಾರು ನಾಲ್ಕೈದು ಬೀದಿ ನಾಯಿಗಳು ಜಿಂಕೆ ಮರಿಯೊಂದನ್ನು ಅಟ್ಟಿಸಿಕೊಂಡು ಓಡಾಡಿಸಿವೆ. ಇದನ್ನು ಗಮನಿಸಿದ ಸ್ಥಳೀಯ ನಿವಾಸಿ ವೆಂಕಟೇಶ್ ಮೂಡ್ಕೇರಿಯವರ ಪುತ್ರ ಶ್ರವಣ ಎಂಬ ಪುಟ್ಟ ಬಾಲಕ ಬೊಬ್ಬೆ ಹೊಡೆದಿದ್ದು, ತಂದೆಯನ್ನು ಕರೆದಿದ್ದಾನೆ. ಮನೆಯವರು ಬಂದ ಕಾರಣ ನಾಯಿಗಳು ಜಿಂಕೆ ಮರಿಯನ್ನು ಬಿಟ್ಟು ಓಡಿವೆಯಾದರೂ ಓಡಿ ಓಡಿ ಸುಸ್ತಾಗಿ ಹೃದಯಾಘಾತದಿಂದ ಜಿಂಕೆ ಮರಿ ಸತ್ತಿದೆ.

ಸುಮಾರು ನಾಲ್ಕು ತಿಂಗಳ ಪ್ರಾಯವಿದ್ದಿರಬಹುದಾದ ಜಿಂಕೆ ಮರಿ ಮುದ್ದಾಗಿದ್ದು ಸಂಜೆ ಸುಮಾರು ಆರು ಗಂಟೆಯವರೆಗೂ ನಾಯಿಗಳು ಕಿತ್ತು ತಿನ್ನದಂತೆ ಕಾದು ಕುಳಿತು ಅರಣ್ಯಾಧಿಕಾರಿಗಳಿಗೆ ಸುದ್ಧಿ ಮುಟ್ಟಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಕುಂದಾಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿ, ನಂತರ ಮರಣೋತ್ತರ ಶವ ಪರೀಕ್ಷೆಗಾಗಿ ಕುಂದಾಪುರಕ್ಕೆ ಸಾಗಿಸಿ ನಂತರ ದಫನ ಮಾಡಿದ್ದಾರೆ.
 
ಈ ಭಾಗದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು, ಸಂಬಂದಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
  • Read: 6 times

ಎಸ್.ವಿ.ಆಂಗ್ಲ ಮಾಧ್ಯಮ ಶಾಲೆಗೆ ಶೇ.97.92 ಫಲಿತಾಂಶ

ಗಂಗೊಳ್ಳಿ : ಗಂಗೊಳ್ಳಿಯ ಜಿಎಸ್‍ವಿಎಸ್ ಅಸೋಸಿಯೇಶನ್ ಪ್ರಾಯೋಜಿತ ಗಂಗೊಳ್ಳಿಯ ಎಸ್.ವಿ. ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಮಾರ್ಚ್ 2015ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 97.92 ಫಲಿತಾಂಶ ಪಡೆದಿದೆ.
 
 
  
 
 
 
ಹಾಜರಾದ 48 ವಿದ್ಯಾರ್ಥಿಗಳಲ್ಲಿ 47 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಈ ಪೈಕಿ 6 ವಿದ್ಯಾರ್ಥಿಗಳು A+ ದರ್ಜೆಯಲ್ಲಿ, 15 ವಿದ್ಯಾರ್ಥಿಗಳು Aದರ್ಜೆಯಲ್ಲಿ, 12 ವಿದ್ಯಾರ್ಥಿಗಳು B+ ದರ್ಜೆಯಲ್ಲಿ, 11 ವಿದ್ಯಾರ್ಥಿಗಳು B ದರ್ಜೆಯಲ್ಲಿ, 2 ವಿದ್ಯಾರ್ಥಿಗಳು C+ದರ್ಜೆಯಲ್ಲಿ ಮತ್ತು ಓರ್ವ ವಿದ್ಯಾರ್ಥಿ ಅ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಎಂ.ರಾಧಿಕಾ ಪೈ (616), ಅನುಷಾ ಶೆಣೈ (608), ದಿಶಾ ಭಟ್ (595), ನಿವೇದಿತಾ ಜಿ.ಪೂಜಾರಿ (581), ಸೌಭಾಗ್ಯ (578) ಮತ್ತು ವರುಣ್ ವಿ.ದೇವಾಡಿಗ (575) ಶಾಲೆಯಲ್ಲಿ ಅತ್ಯಧಿಕ ಅಂಗ ಗಳಿಸಿದ್ದಾರೆ.
  • Read: 5 times

ಗಂಗೊಳ್ಳಿಯಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

ಗಂಗೊಳ್ಳಿ : ಗಂಗೊಳ್ಳಿಯ ನಿನಾದ ಸಂಸ್ಥೆಯ ದಶಮಾನೋತ್ಸವ ಸಮಾರೋಪ ಸಮಾರಂಭ ಪ್ರಯುಕ್ತ ಬುಧವಾರ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀಮದ್ ಸುಧೀಂದ್ರ ತೀರ್ಥ ಸಭಾ ವೇದಿಕೆಯಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನಗೊಂಡಿತು.
 
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಮತ್ತು ಶ್ರೀ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಧಾರ್ಮಿಕ ವಿಧಿವಿಧಾನಗಳು ಜರಗಿದವು. ಬಳಿಕ ಉಭಯ ಶ್ರೀಗಳು ಮಂಗಳಾರತಿ ಬೆಳಗಿ ಆಶೀರ್ವಚನ ನೀಡಿದರು.

ಎಚ್.ಕೃಷ್ಣಾನಂದ ಶೆಣೈ ಗಂಗೊಳ್ಳಿ ದಂಪತಿ ಹಾಗೂ ಎಸ್.ಪಾಂಡುರಂಗ ಆಚಾರ್ಯ ದಂಪತಿಗಳು ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಯಜಮಾನಿಕೆ ವಹಿಸಿದ್ದರು. ದೇವಳದ ಆಡಳಿತ ಮೊಕ್ತೇಸರ ಬೈಲೂರು ಮಂಜುನಾಥ ಶೆಣೈ, ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ, ಜಿಎಸ್‍ಬಿ ಸಮಾಜದ ಪುರೋಹಿತರು, ವೈದಿಕರು, ನಿನಾದ ಸಂಸ್ಥೆಯ ಪದಾಧಿಕಾರಿಗಳು, ದಶಮಾನೋತ್ಸವ ಸಮಿತಿಯ ಪದಾಧಿಕಾರಿಗಳು, ವಿವಿಧ ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಊರ ಪರ ಊರಿನ ಭಜಕರು ಉತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
  • Read: 7 times

ನೀರು ಕೇಳುವ ನೆಪದಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ

ಕುಂದಾಪುರ: ಮನೆಯಲ್ಲಿ ಅಪ್ರಾಪ್ತೆ ಯುವತಿಯೊಬ್ಬಳೇ ಇದ್ದ ಸಂದರ್ಭ ನೀರು ಕೇಳುವ ನೆಪದಲ್ಲಿ ಮನೆಗೆ ಬಂದ ಸಮೀಪದ ಯುವಕ ಲೈಂಗಿಕ ಕಿರುಕುಳ ನೀಡಿದ ಘಟನೆ ಕೊಲ್ಲೂರು ಠಾಣಾ ವ್ಯಾಪ್ತಿಯ ಹಿಜಾಣ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಚಿತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಜಾಣದ ನಿವಾಸಿ ಸಂತೋಷ ಮೊಗವೀರ(27) ಎಂಬಾತನೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ.
 
ಘಟನೆಯ ವಿವರ: ಆರೋಪಿ ಸಂತೋಷ ಮೊಗವೀರ ಎಂಬಾತ ಮನೆ ಸಮೀಪದ ಮನೆಯೊಂದರಲ್ಲಿ ಅಪ್ರಾಪ್ತೆ ಯುವತಿಯೊಬ್ಬಳೇ ಇರುವುದನ್ನು ಗಮನಿಸಿ, ಅಲ್ಲಿಗೆ ಹೋಗಿ ನೀರು ಕೇಳಿದ್ದಾನೆ. ಈ ಸಂದರ್ಭ ನೀರು ತರಲು ಒಳ ಹೋದ ಯುವತಿಯನ್ನು ಅನೈತಿಕವಾಗಿ ಪೀಡಿಸಿದ್ದಾನೆ ಎಂದು ಯುವತಿ ಮನೆಯವರಲ್ಲಿ ಹೇಳಿಕೊಂಡಿದ್ದಾಳೆ.
 
ಈ ಸಂದರ್ಭ ಸ್ಥಳೀಯರಿಗೆ ಸುದ್ಧಿ ತಿಳಿಯುವ ಮೂಲಕ, ಪೊಲೀಸರಿಗೆ ಸುದ್ಧಿ ತಿಳಿದು ಸ್ಥಳಕ್ಕೆ ಆಗಮಿಸಿ ಪೋಸ್ಕೋ ಕಾಯ್ದೆಯಡಿಯಲ್ಲಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಸಂತೋಷ್ ಮೊಗವೀರ ತಲೆ ತಪ್ಪಿಕೊಂಡಿದ್ದು, ಆತ ಸ್ಥಳೀಯ ಸಹಕಾರಿ ಸಂಘವೊಂದರ ಅಧಿಕಾರಿ ಎಂದು ತಿಳಿದುಬಂದಿದೆ.
  • Read: 9 times

ಗಂಗೊಳ್ಳಿ ಮಲ್ಯರಮಠಕ್ಕೆ ಮೂವರು ಪೀಠಾಧಿಪತಿಗಳ ಭೇಟಿ

ಗಂಗೊಳ್ಳಿ : ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದರ ಪಟ್ಟ ಶಿಷ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಮತ್ತು ಶ್ರೀ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ತೀರ್ಥ ಸ್ವಾಮೀಜಿಯವರು ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದರು.
 
ದೇವಸ್ಥಾನಕ್ಕೆ ಚಿತ್ತೈಸಿದ ಮೂವರು ಯತಿವರ್ಯರನ್ನು ದೇವಳದ ವತಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಯಿತು. ದೇವಳದ ಆಡಳಿತ ಮೊಕ್ತೇಸರ ಬೈಲೂರು ಮಂಜುನಾಥ ಶೆಣೈ, ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ, ವೇದಮೂರ್ತಿ ಜಿ.ವಸಂತ ಭಟ್, ಸಮಾಜದ ಪುರೋಹಿತರು, ದೇವಳದ ಆಡಳಿತ ಮಂಡಳಿ ಸದಸ್ಯರು ಹಾಗೂ ಊರಿನ ಹತ್ತು ಸಮಸ್ತರು ಶ್ರೀಗಳವರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿಕೊಂಡರು. ಶ್ರೀದೇವರ ದರ್ಶನ ಪಡೆದ ಮೂವರು ಯತಿವರ್ಯರು ಬಳಿಕ ಆಶೀರ್ವಚನ ನೀಡಿದರು.
  • Read: 9 times

ಗಂಗೊಳ್ಳಿಯಲ್ಲಿ ಮೂವರು ಯತಿವರ್ಯರ ಸಮಾಗಮ ; ವೈಭವದ ಪುರಪ್ರವೇಶ

ಗಂಗೊಳ್ಳಿ : ಗಂಗೊಳ್ಳಿಯ ನಿನಾದ ಸಂಸ್ಥೆಯ ದಶಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಜಿಎಸ್‍ಬಿ ಸಮಾಜದ ಮೂವರು ಯತಿಗಳಾದ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟಶಿಷ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಮತ್ತು ಶ್ರೀ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ತೀರ್ಥ ಸ್ವಾಮೀಜಿಯವರು ಅಪರೂಪವೆಂಬಂತೆ ಜಂಟಿಯಾಗಿ ಮಂಗಳವಾರ ಸಂಜೆ ಗಂಗೊಳ್ಳಿ ಪುರಪ್ರವೇಶ ಮಾಡಿದರು.
 
ವೇದಘೋಷ, ವಿವಿಧ ವಾದ್ಯ ನಾದಗಳೊಂದಿಗೆ ಉಭಯ ಶ್ರೀಗಳಿಗೆ ಗಂಗೊಳ್ಳಿಯ ಎಸ್.ವಿ.ಪದವಿಪೂರ್ವ ಕಾಲೇಜು ಬಳಿ ಪೂರ್ಣಕುಂಭ ಸ್ವಾಗತದೊಂದಿಗೆ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದವರೆಗೆ ಪುರಮೆರವಣಿಗೆ ನಡೆಸಲಾಯಿತು. ನೆರೆದಿದ್ದ ಸಹಸ್ರಾರು ಮಂದಿ ಭಜಕರು ಮೂವರು ಯತಿವರ್ಯರನ್ನು ಒಟ್ಟಿಗೆ ನೋಡಿ ಪುಳಕಿತರಾದರು. ಮೂವರು ಪೀಠಾಧಿಪತಿಗಳು ಸಮಾಗಮದಿಂದ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಪುರ ಮೆರವಣಿಗೆ ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದಂತೆ ಮಳೆಯ ಸಿಂಚನ ಪುಷ್ಪವೃಷ್ಟಿ ನಡೆಯಿತು.
  • Read: 5 times
Subscribe to this RSS feed